ಬನವಾಸಿ ಬಳಿಯ ಅಬ್ದುಲ್ ಶೇಖ್ ಅವರು ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದು, ಸಾಲ ತೀರಿಸಲಾಗದ ಕಾರಣ ಆ ಕಾರನ್ನು ಬೇರೆಯವರಿಗೆ ಮಾರಿದ್ದಾರೆ. ಆದರೆ, ಆ ಕಾರು ಖರೀದಿಸಿದವರು ಸಹ ಸಾಲದ ಕಂತು ಪಾವತಿ ಮಾಡದೇ ಅಬ್ದುಲ್ ಶೇಖ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಶಿರಸಿ ಬನವಾಸಿ ಬಳಿಯ ಅಂಡಗಿಯಲ್ಲಿ ಅಬ್ದುಲ್ ಹಮೀದ್ ಶೇಖ್ ಅವರು ವಾಸವಾಗಿದ್ದಾರೆ. ಅವರು ಶ್ರೀರಾಮ ಫೈನಾನ್ಸಿನಲ್ಲಿ 3 ಲಕ್ಷ ರೂ ಸಾಲ ಮಾಡಿ ಮಾರುತಿ ಇಕೋ ಕಾರು ಖರೀದಿಸಿದ್ದಾರೆ. ಆದರೆ, ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗದೇ ಅದನ್ನು ಮಾರಾಟಕ್ಕೆ ನಿರ್ಧರಿಸಿದ್ದಾರೆ. ತುಮಕೂರಿನ ರಾಮಕುಮಾರ ಎಚ್ ಆರ್ ಎಂಬಾತರು 3.75 ಲಕ್ಷ ರೂ ಕೊಟ್ಟು ಆ ಕಾರು ಖರೀದಿಗೆ ನಿರ್ಧರಿಸಿದ್ದಾರೆ. ನಡೆದ ಮಾತುಕಥೆ ಪ್ರಕಾರ ಆ ಕಾರು ಖರೀದಿಸಿದ ರಾಮಕುಮಾರ್ ಅವರು ಸಾಲದ ಕಂತು ಪಾವತಿಸುವ ಹೊಣೆ ಹೊತ್ತಿದ್ದಾರೆ.
ಈ ಕುರಿತು 2025ರ ಡಿಸೆಂಬರ್ 11ರಂದು ಅಬ್ದುಲ್ ಶೇಕ್ ಹಾಗೂ ರಾಮಕುಮಾರ ಅವರ ನಡುವೆ ಕರಾರು ನಡೆದಿದೆ. ಆದರೆ, ಆ ಕಾರು ಖರೀದಿಸಿದ ರಾಮಕುಮಾರ್ ಅವರು ಸಾಲದ ಕಂತು ಸರಿಯಾಗಿ ಪಾವತಿ ಮಾಡಿಲ್ಲ. ಆ ಕಾರನ್ನು ಅವರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಆದರೆ, ದಾಖಲೆಗಳಲ್ಲಿ ಕಾರಿನ ಮಾಲಕತ್ವ ಅಬ್ದುಲ್ ಶೇಕ್ ಅವರ ಹೆಸರಿನಲ್ಲಿಯೇ ಮುಂದುವರೆದಿದೆ. ನಾಲ್ಕು ತಿಂಗಳ ಕಂತು ಬಾರದ ಕಾರಣ ಫೈನಾನ್ಸಿನವರು ಅಬ್ದುಲ್ ಶೇಖ್ ಅವರನ್ನು ವಿಚಾರಿಸಿದ್ದಾರೆ.
ಸಾಲದ ಕಂತು ಪಾವತಿಯಾಗದ ಕಾರಣ ಅಬ್ದುಲ್ ಶೇಖ್ ಅವರು ರಾಮಕುಮಾರ ಅವರನ್ನು ವಿಚಾರಿಸಿದ್ದು, ಆಗ ರಾಮಕುಮಾರ ಅವರು `ಆ ಕಾರು ನಾನು ಮಾರಿದ್ದೇನೆ’ ಎಂದಿದ್ದಾರೆ. `ಕಂತು ಪಾವತಿಸುವುದಿಲ್ಲ. ನೀ ಏನಾದರೂ ಮಾಡಿಕೋ’ ಎಂದು ಉತ್ತರಿಸಿದ್ದಾರೆ. `ಕಾರು ಇಲ್ಲ. ಸಾಲವೂ ತೀರಿಲ್ಲ’ ಎಂಬ ಪರಿಸ್ಥಿತಿಗೆ ಒಳಗಾದ ಅಬ್ದುಲ್ ಶೇಖ್ ಅವರು ಈ ಕುರಿತು ಬನವಾಸಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.