ಕಾರವಾರದ ಕಿನ್ನರ ಗ್ರಾಮದ ಜನ ಉಪ್ಪು ನೀರಿನ ಸಮಸ್ಯೆಯಿಂದ ಕೆಂಗಟ್ಟಿದ್ದು, `ಅವರಿಗೆ ಕುಡಿಯುವುದಕ್ಕಾದರೂ ಶುದ್ಧ ನೀರು ಕೊಡಿ’ ಎಂದು ಡೀಸಿ ಕೆ. ಲಕ್ಷ್ಮಿಪ್ರಿಯಾ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿ’ ಎಂದವರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೂ ನಿರ್ದೇಶನ ನೀಡಿದ್ದಾರೆ.
ಶನಿವಾರ ಕಾರವಾರ ತಾಲೂಕು ಕಿನ್ನರ ಗ್ರಾಮ ಪಂಚಾಯತ್ ನಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿರುವ ಮತ್ತು ಬಾವಿ ಗಳಲ್ಲಿ ಉಪ್ಪು ನೀರು ಸೇರ್ಪಡೆಯಾಗುತ್ತಿರುವ ಕುರಿತ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಲ್ಲಿಸಿದ ಮನವಿಯ ಕುರಿತು ಮಾತನಾಡಿದ ಅವರು `ಸಣ್ಣ ನೀರಾವರಿ ಇಲಾಖೆಯಿಂದ ಈ ಭಾಗದಲ್ಲಿ ಉಪ್ಪುನೀರಿನ ಸಮಸ್ಯೆ ತಡೆಗೆ ಖಾರ್ ಲ್ಯಾಂಡ್ ನಿರ್ಮಾಣ ಮಾಡುವ ಕುರಿತಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಕುರಿತಂತೆ ಪರಿಶೀಲಿಸಿ ಆದಷ್ಟು ಶೀಘ್ರದಲ್ಲಿ ಈ ಸಮಸ್ಯಗೆ ಪರಿಹಾರ ಒದಗಿಸಲಾಗುವುದು’ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಅವರು ಮಾತನಾಡಿ `ಈ ಭಾಗದಲ್ಲಿ ನೀರಿನ ಸಮಸ್ಯೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆವತಿಯಿಂದ ಕೈಗೊಂಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಶಾಶ್ವತ ಪರಿಹಾರ ಒದಗಿಸಲಾಗುವುದು. ಈ ಯೋಜನೆಯು ಮಾರ್ಚ್ ಅಂತ್ಯದೊಳಗೆ ಮುಕ್ತಾಯವಾಗಲಿದೆ’ ಎಂದರು.
ಈ ಭಾಗದಲ್ಲಿ ಕಾಳಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ದೂರಿನ ಕುರಿತಂತೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಮೂಲಕ ಇಲ್ಲಿ ಚೆಕ್ ಪೋಸ್ಟ್ ಆರಂಭಿಸಿ ಈ ಅಕ್ರಮವನ್ನು ತಡೆಯುವುದಾಗಿ ತಿಳಿಸಿದರು. ಹೆಸ್ಕಾಂ ಇಲಾಖೆವತಿಯಿಂದ ವಿದ್ಯುತ್ ಲೈನ್ಗಳ ದುರಸ್ತಿ, ವಿದ್ಯುತ್ ಕಂಬಗಳ ಸ್ಥಳಾಂತರ ಮತ್ತು ಅರಣ್ಯ ಇಲಾಖೆಯಿಂದ ಅಪಾಯಕಾರಿ ಮರಗಳ ತೆರವು ಕುರಿತು ಸಲ್ಲಿಕೆಯಾಗಿರುವ ದೂರುಗಳನ್ನು, ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ನಿಯಂತ್ರಣ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು 40 ಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿದ್ದು, ಈ ಎಲ್ಲಾ ದೂರುಗಳಿಗೆ ನಿಗಧಿತ ಅವಧಿಯೊಳಗೆ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಕಾರವಾರ ಉಪ ವಿಭಾಗಾಧಿಕಾರಿ ರಮ್ಯಾ, ತಹಸೀಲ್ದಾರ್ ನಿಶ್ಚಲ್ ನರೋನ್ಹಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೀರನಗೌಡ ಏನಗೌಡರ, ಡಿವೈಎಸ್ಪಿ ಗಿರೀಶ್ ಹಾಗೂ ಎಲ್ಲಾ ಇಲಾಖಾಧಿಕಾರಿಗಳು ಇದ್ದರು.