ಶಿರಸಿ ಸುತ್ತಲು ಕಬ್ಬಿಣ ಕಳ್ಳರ ಕಾಟ ಹೆಚ್ಚಾಗಿದೆ. ನಗರಸಭೆ ಒಡೆತನದ ಕಬ್ಬಿಣ ಪೈಪ್ ಕಳ್ಳತನದ ಪ್ರಕರಣ ತನಿಖೆಯಲ್ಲಿರುವಾಗಲೇ ಸರ್ಕಾರಿ ಒಡೆತನದ ಮತ್ತೊಂದು ಕಬ್ಬಿಣದ ಸಾಮಗ್ರಿಗಳು ಕಣ್ಮರೆಯಾಗಿದೆ.
ಶಿರಸಿಯ ಉಂಚಳ್ಳಿಯ ಅರ್ಲಹೊಂಡದ ಬಳಿ ಸೇತುವೆ ಕಂ ಬಾಂದಾರ್’ಗೆ ಅಳವಡಿಸಿದ್ದ ಕಬ್ಬಿಣದ ಗೇಟುಗಳನ್ನು ಕಳ್ಳರು ದೋಚಿದ್ದಾರೆ. ತಲಾ 10 ಸಾವಿರ ರೂ ಬೆಲೆಯ 24 ಗೇಟುಗಳು ಅಲ್ಲಿಂದ ಕಾಣೆಯಾಗಿವೆ. 2.40 ಲಕ್ಷ ರೂ ಮೌಲ್ಯದ ಕಬ್ಬಿಣ ಕದ್ದವರಿಗಾಗಿ ಬನವಾಸಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಇಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸೇತುವೆ ಹಾಗೂ ಬಾಂದಾರ್ ನಿರ್ಮಿಸಲಾಗಿದೆ. ಆ ಬಾಂದಾರಿಗೆ ಕಬ್ಬಿಣದ ಗೇಟುಗಳನ್ನು ಅಳವಡಿಸಲಾಗಿದೆ. ಒಟ್ಟು 39 ಗೇಟುಗಳು ಅಲ್ಲಿದ್ದು, ಅದರಲ್ಲಿ 24 ಗೇಟುಗಳು ಕಾಣೆಯಾಗಿವೆ. ಸೆಪ್ಟೆಂಬರ್ 15ರ ಸಂಜೆ ಸಣ್ಣ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ ವಿಕಾಸ ಕೃಷ್ಣ ನಾಯ್ಕ ಅವರು ಅಲ್ಲಿ ಹೋಗಿ ಪರಿಶೀಲನೆ ಮಾಡಿದ್ದಾರೆ. ಆಗ, ಅಲ್ಲಿಯೇ ಇದ್ದ ಎಲ್ಲಾ ಗೇಟುಗಳು ಮರುದಿನ ಬೆಳಗ್ಗೆ ಆಗುವುದರೊಳಗೆ ಕಣ್ಮರೆಯಾಗಿದೆ.
ಮಳೆಗಾಲದ ಹಿನ್ನಲೆ ಮೇ 28ರಂದು ಬಾಂದಾರಿನ 37 ರಂದ್ರಕ್ಕೆ ಅಳವಡಿಸಿದ್ದ ಕಬ್ಬಿಣದ ಗೇಟುಗಳನ್ನು ಅಧಿಕಾರಿಗಳು ತೆರವು ಮಾಡಿದ್ದರು. ಒಂದು ಗೇಟನ್ನು ಮಾತ್ರ ಹಾಗೇ ಬಿಟ್ಟಿದ್ದರು. ತೆರವು ಮಾಡಿದ ಎಲ್ಲಾ ಗೇಟುಗಳನ್ನು ಅಲ್ಲಿಯೇ ದಾಸ್ತಾನು ಮಾಡಿದ್ದರು. ಸೆಪ್ಟೆಂಬರ್ 16ರಂದು ಅಲ್ಲಿನ ಈಶ್ವರ ನಾಯ್ಕ ಅವರು ಅಧಿಕಾರಿಗಳಿಗೆ ಫೋನ್ ಮಾಡಿ `ಗೇಟ್ ಕಾಣುತ್ತಿಲ್ಲ’ ಎಂದು ಹೇಳಿದರು. ಆಗ, ವಿಕಾಸ ನಾಯ್ಕ ಅವರು ಸ್ಥಳಕ್ಕೆ ಹೋಗಿ ಶೋಧ ನಡೆಸಿದರು. ನಂತರ ಕಚೇರಿಗೆ ಫೋನ್ ಮಾಡಿ `ಗೇಟುಗಳನ್ನು ಬೇರೆ ಕಡೆ ಒಯ್ದಿದ್ದೀರಾ?’ ಎಂದು ಪ್ರಶ್ನಿಸಿದರು. `ಇಲ್ಲ’ ಎಂಬ ಉತ್ತರ ಬಂದ ನಂತರ ಅಲ್ಲಿದ್ದ ಗೇಟುಗಳನ್ನು ಎಣಿಸಿದರು. ಆಗ, 24 ಗೇಟುಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತು.
ತಕ್ಷಣ ಮೇಲಧಿಕಾರಿಗಳಿಗೆ ವಿಕಾಸ ನಾಕ ಅವರು ವಿಷಯ ಮುಟ್ಟಿಸಿದರು. ಗೇಟು ಕದ್ದವರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಪ್ರಕರಣ ದಾಖಲಿಸಿದರು.