ಮುಂಡಗೋಡಿನ ಸನವಳ್ಳಿ ಬಳಿಯ ಕಾಡಿನಲ್ಲಿರಬೇಕಾದ ಚುಕ್ಕಿ ಜಿಂಕೆ ಊರಿಗೆ ಬಂದು ಪ್ರಾಣ ಬಿಟ್ಟಿದೆ. ಅಪರೂಪಕ್ಕೆ ಒಮ್ಮೆ ಜಿಂಕೆ ನೋಡಿದ ನಾಯಿಗಳು ಏಕಾಏಕಿ ಆಕ್ರಮಣ ನಡೆಸಿದ್ದು, ನಾಯಿ ದಾಳಿಗೆ ಜಿಂಕೆಯ ಜೀವ ಹೋಗಿದೆ.
ಮುಂಡಗೋಡದ ಸನವಳ್ಳಿ ಗ್ರಾಮದ ಸಮೀಪ ಜಿಂಕೆಯೊoದು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿತ್ತು. ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದವು. ನಾಯಿ ದಾಳಿ ನೋಡಿದ ಜನ ಅದನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಗಂಭೀರವಾಗಿ ಗಾಯಗೊಂಡ ಜಿಂಕೆ ಅಲ್ಲಿಯೇ ಉಸಿರು ನಿಲ್ಲಿಸಿತು.
ಸನವಳ್ಳಿ ಗ್ರಾಮದ ಯೋಗಿ ಅವರ ಜಮೀನಿನಲ್ಲಿ ಓಡಾಟ ನಡೆಸುತ್ತಿದ್ದ ಜಿಂಕೆ ಅಲ್ಲಿಯೇ ಶವವಾಗಿ ಬಿದ್ದಿತು. ನಾಯಿಗಳು ಗುಂಪು ಕಟ್ಟಿ ನಡೆಸಿದ ಆಕ್ರಮಣದಿಂದ ವನ್ಯಜೀವಿ ಸಾವನಪ್ಪಿತು. ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣ ಅರಣ್ಯ ರಕ್ಷಕ ಮುತ್ತುರಾಜ ಹಳ್ಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಪಶುವೈದ್ಯರಾದ ಡಾ ಜಯಚಂದ್ರ ಅವರು ಸ್ಥಳಕ್ಕೆ ಆಗಮಿಸಿ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಇಲಾಖೆಯವರು ಜಿಂಕೆಯ ಶವವನ್ನು ಕಾನೂನುಪ್ರಕಾರ ವಿಲೇವಾರಿ ಮಾಡಿದರು. ರಾಜು ಗುಬ್ಬಕನವರ, ಶಂಕ್ರಪ್ಪ ಕೆರಿಹೊಲದವರ, ದೇವರಾಜ ಕಳಸಗೇರಿ, ವಾಚರ್ ಹಸನಸಾಬ, ರುದ್ರಪ್ಪ ಅವರು ಈ ವೇಳೆ ಇದ್ದರು.