ಶಿರಸಿಯ ಮಗುವೊಂದನ್ನು ಶಿವಮೊಗ್ಗದ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಸಾಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿಯವರು ಆ ಮಗುವನ್ನು ತಮ್ಮ ಜವಾಬ್ದಾರಿಗೆ ಪಡೆದಿದ್ದಾರೆ. 2 ವರ್ಷದ ಮಗು ಸದ್ಯ ಶಿರಸಿಯ ಸಾಂತ್ವಾನ ಕೇಂದ್ರದಲ್ಲಿ ಆಶ್ರಯಪಡೆಯುತ್ತಿದೆ.
ಶಿವಮೊಗ್ಗದ ಸೊರಬದ ತಲಗಡ್ಡೆಯ ವ್ಯಕ್ತಿಯೊಬ್ಬರು ಆ ಮಗುವನ್ನು ಸಾಕುತ್ತಿದ್ದು, ಅವರ ಮೇಲೆ ಅನುಮಾನ ಮೂಡಿದ ಕಾರಣ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಎರಡು ವರ್ಷದ ಗಂಡು ಮಗುವಿಗೆ ಆ ವ್ಯಕ್ತಿ ಮಗುವಿಗೆ ಖಾಜಾ ಮೊಹದ್ಧೀನ್ ಎಂದು ನಾಮಕರಣ ಮಾಡಿದ್ದಾರೆ. ವಿಚಾರಣೆ ವೇಳೆ ಆ ಮಗುವಿನ ತಾಯಿ ಶಿರಸಿ ಮೂಲದವರು ಎಂದು ಗೊತ್ತಾಗಿದೆ. ಬೇರೆಯವರ ಮಗುವನ್ನು ಅನಧಿಕೃತವಾಗಿ ಸಾಕುತ್ತಿದ್ದ ಕಾರಣ ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿಯವರು ಆ ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ಅದಾದ ನಂತರ ಆ ಮಗುವನ್ನು ಆರೋಪಿಯಿಂದ ಬೇರ್ಪಡಿಸಿ ಶಿರಸಿಗೆ ಕರೆತಂದಿದ್ದಾರೆ. . ಸೆಪ್ಟೆಂಬರ್ 10ರಂದು ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಶಿರಸಿಯ ಮರಾಠಿಕೊಪ್ಪದಲ್ಲಿರುವ ಸಹಾಯ ಟ್ರಸ್ಟ್ ದತ್ತು ಕೇಂದ್ರದಲ್ಲಿ ಮಗುವಿಗೆ ರಕ್ಷಣೆ ನೀಡಲಾಗಿದೆ. ಇದರೊಂದಿಗೆ ಶಿವಮೊಗ್ಗದ ಅಧಿಕಾರಿಗಳು ದಾಖಲಿಸಿದ ಪ್ರಕರಣ ಶಿರಸಿಯ ಮಕ್ಕಳ ಕಲ್ಯಾಣ ಸಮಿತಿಗೆ ವರ್ಗವಾಗಿದೆ. ಹೀಗಾಗಿ ಆ ಮಗುವಿನ ನಿಜವಾದ ಪಾಲಕರು ಯಾರು? ಎಂದು ಇಲ್ಲಿನ ಅಧಿಕಾರಿಗಳು ಹುಡುಕಾಟ ಶುರು ಮಾಡಿದ್ದಾರೆ.
ಈ ಕುರಿತು ಇನ್ನಷ್ಟು ವಿಚಾರಣೆ ನಡೆಸಿದಾಗ ಆ ಮಗುವಿನ ತಾಯಿ ಸಾವನಪ್ಪಿದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಆ ಮಗುವನ್ನು ಕಾನೂನುಬದ್ಧವಾಗಿ ದತ್ತು ಪ್ರಕ್ರಿಯೆಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಮಗುವಿನ ಜೈವಿಕ ಪಾಲಕರ ಪತ್ತೆ ಅಗತ್ಯವಾಗಿದೆ. ಹೀಗಾಗಿ ಈ ವಿಷಯದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯವರು ಪ್ರಕಟಣೆ ಹೊರಡಿಸಿದ್ದು, ಈ ಸುದ್ದಿ ನೋಡಿದ ಮಗುವಿನ ಪಾಲಕರು ಕೂಡಲೇ ಮಕ್ಕಳ ಕಲ್ಯಾಣ ಸಮಿತಿ-02, ಬಾಲಕರ ಬಾಲಮಂದಿರ ಕೋರ್ಟ ರಸ್ತೆ ಶಿರಸಿ ಇಲ್ಲಿಗೆ ಹಾಜರಾಗುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸೂಚಿಸಿದ್ದಾರೆ.