ಗಣಹೋಮ ಮಾಡುವುದಕ್ಕಾಗಿ ಮಡಿ ನೀರು ತರಲು ಕುಮಟಾದ ಕೆರೆಗೆ ಹೋಗಿದ್ದ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಮಂಜುನಾಥ ನಾಯ್ಕ ಅವರು ಅದೇ ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದಾರೆ. ನೀರು ತರಲು ಹೋದ ಮಂಜುನಾಥ ನಾಯ್ಕ ಅವರು ತಾಸು ಕಳೆದರೂ ಬಾರದ ಕಾರಣ ಹುಡುಕಾಟ ನಡೆಸಿದಾಗ ಅವರ ಶವ ಸಿಕ್ಕಿದೆ.
ಕುಮಟಾ ಕೋನಳ್ಳಿಯಲ್ಲಿ ಮಂಜುನಾಥ ಕೃಷ್ಣಪ್ಪ ನಾಯ್ಕ ಅವರು ತಮ್ಮ ಬಾಲ್ಯ ಕಳೆದಿದ್ದರು. ಉನ್ನತ ವ್ಯಾಸಂಗ ಮಾಡಿದ ಅವರು ಶಿವಮೊಗ್ಗ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಯಾಗಿ ಸೇವೆ ಮಾಡಿದ್ದರು. ನಿವೃತ್ತಿ ನಂತರ ಅವರು ಬೆಂಗಳೂರಿನ ಕೆಂಗೇರಿ ವಿಶ್ವೇಶ್ವರಯ್ಯ ಲೇಔಟಿನಲ್ಲಿ ವಾಸವಾಗಿದ್ದರು. ಪ್ರತಿ ವರ್ಷ ಗಣೇಶ ಹಬ್ಬಕ್ಕೆ ಅವರು ತಮ್ಮ ಮೂಲ ಊರಾದ ಕುಮಟಾಗೆ ಬರುತ್ತಿದ್ದರು. ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದರು. ಅದರಂತೆ, ಈ ವರ್ಷವೂ ಗಣೇಶ ಚತುರ್ಥಿಗಾಗಿ ಅವರು ಕುಮಟಾಗೆ ಬಂದಿದ್ದು, ಕೋನಳ್ಳಿಯಲ್ಲಿ ವಾಸವಾಗಿದ್ದರು.
ಗಣೇಶ ಹಬ್ಬದ ಅಂಗವಾಗಿ ಸೆಪ್ಟೆಂಬರ್ 15ರಂದು ಅವರು ಗಣಹೋಮ ನಡೆಸಲು ನಿರ್ಧರಿಸಿದ್ದರು. ಅದಕ್ಕಾಗಿ ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಪೂಜೆಗೆ ಮಡಿ ನೀರು ತರುವುದಕ್ಕಾಗಿ ಅವರು ಆ ದಿನ ಬೆಳಗ್ಗೆ 11 ಗಂಟೆ ವೇಳೆಗೆ ತೋಟಕ್ಕೆ ಹೋಗಿದ್ದರು. ತೋಟದಲ್ಲಿರುವ ಕೆರೆಯಿಂದ ನೀರು ತೆಗೆಯುವಾಗ ಅವರು ಅಲ್ಲಿ ಕಾಲು ಜಾರಿ ಬಿದ್ದರು. 12ಗಂಟೆಯಾದರೂ ಅವರು ಮನೆಗೆ ಬರದ ಕಾರಣ ಅಲ್ಲಿದ್ದವರು ಹುಡುಕಾಟ ಶುರು ಮಾಡಿದರು. ಅಷ್ಟರೊಳಗೆ ಮಂಜುನಾಥ ನಾಯ್ಕ ಅವರು ನೀರಿನಲ್ಲಿ ಮುಳುಗಿದ್ದರು. ಅಲ್ಲಿ ಉಸಿರಾಡಲು ಸಾಧ್ಯವಾಗದೇ ಸಾವನಪ್ಪಿದ್ದರು.
ತಂದೆಯ ಅಕಾಲಿಕ ಮರಣದ ಬಗ್ಗೆ ಅವರ ಮಗ ಚಿನ್ಮಯಕೃಷ್ಣ ನಾಯ್ಕ ಅವರು ಮಾಹಿತಿ ನೀಡಿದರು. ಕುಮಟಾ ಪೊಲೀಸರು ಕೇಸು ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
`ಅಪಾಯಕಾರಿ ಸ್ಥಳಗಳ ಕಡೆ ಹೋಗಬೇಡಿ’