ಕಸ್ತೂರಿ ರಂಗನ್ ವರದಿಯಲ್ಲಿನ ಅವೈಜ್ಞಾನಿಕ ಅಂಶಗಳ ಬಗ್ಗೆ ವಿಶ್ರಾಂತ ನ್ಯಾಯ ಮೂರ್ತಿ ಎಚ್ ಎನ್ ನಾಗಮೋಹನದಾಸ ಅವರು ಬೆಳಕು ಚೆಲ್ಲಿದ್ದಾರೆ. ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಯ ಜಾರಿಗೆ ಅವರು ಆಕ್ಷೇಪವ್ಯಕ್ತಪಡಿಸಿದ್ದಾರೆ.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ ಅವರನ್ನು ಈ ದಿನ ಭೇಟಿ ಆಗಿದ್ದು, ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಿದ್ದಾರೆ. ಅದಾದ ನಂತರ ವರದಿಗೆ ಆಕ್ಷೇಪಿಸಿ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ. `ವರದಿಗಿಂತಲೂ ಮುಖ್ಯವಾಗಿ ಬೌತಿಕ ಸರ್ವೇ ಮತ್ತು ಗ್ರಾಮ ಸಭೆ ನಿರ್ಣಯಕ್ಕೆ ಮನ್ನಣೆ ಕೊಡಬೇಕು’ ಎಂದು ಸಮಿತಿಯವರು ಆಗ್ರಹಿಸಿದ್ದಾರೆ.
`ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ಅಂಶಗಳನ್ನು ಹೊಂದಿರುವುದಲ್ಲದೇ ಪ್ರಾಯೋಗಿಕವಾಗಿ ಸಮಿತಿಯ ಸದಸ್ಯರು ಪಶ್ಚಿಮ ಘಟ್ಟದ ಹಳ್ಳಿಗಳಿಗೆ ಭೇಟಿ ನೀಡದೇ ಕೇವಲ ಉಪಗೃಹ ಚಿತ್ರಗಳನ್ನ ಆಧಾರವಾಗಿ ಇಟ್ಟುಕೊಂಡು ವರದಿ ಸಿದ್ಧಪಡಿಸಿದ್ದಾರೆ. ಇಲ್ಲಿ ಕೃಷಿ ಚಟುವಟಿಕೆಯ ಪ್ರದೇಶವನ್ನು ಸಹಿತ ನೈಸರ್ಗಿಕ ಅರಣ್ಯವೆಂದು ತಪ್ಪಾಗಿ ವರ್ಗಿಕರಿಸಲಾಗಿದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ವಿವರಿಸಿದ್ದಾರೆ. `ಪರಿಸರ ರಕ್ಷಣಾ ವಲಯಗಳ ಸುತ್ತಲಿನ 10 ಕೀಮಿ ಪ್ರದೇಶಗಳನ್ನ ಬಫರ್ ವಲಯವೆಂದು ಗುರುತಿಸಿರುವುದು, ವರದಿ ತಯಾರಿಸುವಾಗ ಜನಪ್ರತಿನಿಧಿ ಮತ್ತು ಸ್ಥಳೀಯ ಸಂಸ್ಥೆಗಳ, ಜನಪ್ರತಿನಿಧಿಗಳ, ಗ್ರಾಮ ಸಭೆಗಳ ಮಾನ್ಯತೆ ನೀಡದೇ ಇರುವುದು ಅವೈಜ್ಞಾನಿಕ’ ಎಂದವರು ವಾದಿಸಿದ್ದಾರೆ.
ಈ ವೇಳೆ ಹೋರಾಟಗಾರರ ವೇದಿಕೆಯ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ, ಸಂಘಟನೆ ಜಿಲ್ಲಾ ಸಂಚಾಲಕ ಮಹಭಲೇಶ್ವರ ನಾಯ್ಕ ಬೇಡ್ಕಣಿ, ಬಿಡಿ ನಾಯ್ಕ ಕುರಗೆತೋಟ, ಭಾಸ್ಕರ್ ಕುರಗೆತೋಟ, ಶ್ರೀಧರ ಎಸ್ ಹೆಗಡೆ ಕೆರೆಮನೆ, ಜಗದೀಶ್ ನಾಯ್ಕ ಬಿಕ್ಕಳಸೆ, ಆರೀಫ್ ಶೇಖ ಬಿಸಲಕೊಪ್ಪ ಸಹ ಇದ್ದರು.