ಕುಮಟಾ ನೆಲ್ಲಿಕೇರಿ ಟೆಂಪೋ ನಿಲ್ದಾಣದ ಬಳಿಯಿದ್ದ ಗಣೇಶ ಇಲೆಕ್ಟಿçಕಲ್’ಗೆ ನುಗ್ಗಿದ ಕಳ್ಳರಿಗೆ 100ರೂ ಸಿಕ್ಕಿದೆ. ಕಷ್ಟಪಟ್ಟು ಅಂಗಡಿ ಬೀಗ ಒಡೆದ ಕಳ್ಳರು 100ರೂ ಜೊತೆ ಅಲ್ಲಿದ್ದ 20 ಕೆಜಿ ತಾಮ್ರದ ತಂತಿ ಕದ್ದೊಯ್ದಿದ್ದಾರೆ.
ಕುಮಟಾ ಹೆಗಡೆ ಚಿಟ್ಟಕಂಬಿಯ ಭಾಸ್ಕರ ನಾಯ್ಕ ಅವರು ಎಲೆಕ್ಟಿಕಲ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ನೆಲ್ಲಿಕೇರಿ ಟೆಂಪೋ ನಿಲ್ದಾಣದ ಬಳಿಯಿದ್ದ ಗಣೇಶ ಇಲೆಕ್ಟಿಕಲ್ ಎಂಬ ಮಳಿಗೆಯನ್ನು ಅವರು ಹೊಂದಿದ್ದಾರೆ. ಒಳ್ಳೆಯ ಸರ್ವೀಸ್ ಕೊಡುವ ಕಾರಣ ಅವರಿಗೆ ತಮ್ಮದೇ ಆದ ಗ್ರಾಹಕರಿದ್ದಾರೆ. ಹೆಚ್ಚು ಜನ ಬರುವುದನ್ನು ನೋಡಿದ ಕಳ್ಳರು ಆ ಅಂಗಡಿಯಲ್ಲಿ ಸಾಕಷ್ಟು ಹಣವಿರಬಹುದು ಎಂದು ಭಾವಿಸಿ ಕನ್ನ ಹಾಕಿದ್ದಾರೆ.
ದಿನವೂ ದುಡಿದ ಹಣವನ್ನು ಭಾಸ್ಕರ ನಾಯ್ಕ ಅವರು ಮನೆಗೆ ಒಯ್ಯುತ್ತಿದ್ದು, ಇದನ್ನು ಅರಿಯದೇ ಕಳ್ಳರು ಅವರ ಅಂಗಡಿಯ ಬೀಗ ಒಡೆದಿದ್ದಾರೆ. ಸೆಪ್ಟೆಂಬರ್ 24ರ ರಾತ್ರಿ ಭಾಸ್ಕರ ನಾಯ್ಕ ಅವರು 8 ಗಂಟೆಗೆ ಅಂಗಡಿ ಬಂದ್ ಮಾಡಿದ್ದು, ಅದಾದ ನಂತರ ಕಳ್ಳರ ಆಗಮನವಾಗಿದೆ. ಭಾಸ್ಕರ್ ನಾಯ್ಕ ಅವರು ಸೆಪ್ಟೆಂಬರ್ 25ರ ಬೆಳಗ್ಗೆ ಬಂದು ನೋಡಿದಾಗ ಅಂಗಡಿ ಬೀಗ ಒಡೆದಿದ್ದು, ಡ್ರಾವರಿನಲ್ಲಿದ್ದ 100ರೂ ಕಳ್ಳತನವಾಗಿದೆ. ಜೊತೆಗೆ ಅಲ್ಲಿದ್ದ ಹಳೆಯ ತಾಮ್ರದ ತಂತಿಗಳನ್ನು ಕಳ್ಳರು ಒಯ್ದಿದ್ದಾರೆ.
100ರೂ ಕದಿಯುವುದಕ್ಕಾಗಿ 58ರೂಪಾಯಿಯ ಬೀಗ ಒಡೆದ ಕಳ್ಳರಿಗಾಗಿ ಭಾಸ್ಕರ ನಾಯ್ಕ ಅವರು ಹುಡುಕಾಟ ನಡೆಸಿದ್ದಾರೆ. ಅವರನ್ನು ಹುಡುಕಿ, ಕ್ರಮ ಜರುಗಿಸಿ ಎಂದು ಪೊಲೀಸರಿಗೂ ದೂರು ನೀಡಿದ್ದಾರೆ.