ಅಂಕೋಲಾ ಹಳವಳ್ಳಿಯಲ್ಲಿ ಅಡಿಕೆ ಕಳ್ಳತನವಾಗಿದೆ. ಪುನರ್ವಸತಿ ಕೇಂದ್ರದ ರಾಮಕೃಷ್ಣ ಹರಿಮನೆ ಅವರ ಒಡೆತನದಲ್ಲಿದ್ದ ಮೂರು ಚೀಲ ಅಡಿಕೆಯನ್ನು ಕಳ್ಳರು ದೋಚಿದ್ದಾರೆ.
ಅಂಕೋಲಾದ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳವಳ್ಳಿ ಪುನರ್ವಸತಿ ಕೇಂದ್ರದಲ್ಲಿ ರಾಮಕೃಷ್ಣ ನರಸಿಂಹ ಹರಿಮನೆ ಅವರು ವಾಸವಾಗಿದ್ದಾರೆ. ಕೃಷಿಕರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ತಾವು ಬೆಳೆದ ಅಡಿಕೆಯನ್ನು ಅವರು ಸಂಸ್ಕರಿಸಿ ಚೀಲದಲ್ಲಿ ತುಂಬಿಸಿದ್ದಾರೆ. ತಲಾ 71 ಕೆಜಿಯಂತೆ ಚೀಲ ತುಂಬಿಸಿ ಅದನ್ನು ತಮ್ಮ ಮನೆ ಹಿಂದಿನ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದಾರೆ. ಅದನ್ನು ನೋಡಿದ ಕಳ್ಳರು ಅಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದಾರೆ.
ಸೆಪ್ಟೆಂಬರ್ 14ರ ಬೆಳಗ್ಗೆ 10ಗಂಟೆಯವರೆಗೂ ಅವರ ಗೋದಾಮಿನಲ್ಲಿದ್ದ ಎಲ್ಲಾ ಅಡಿಕೆಗಳು ಸರಿಯಾಗಿಯೇ ಇವೆ. ಸೆಪ್ಟೆಂಬರ್ 18ರ ಬೆಳಗ್ಗೆ 10ಗಂಟೆಗೆ ಗಮನಿಸಿದಾಗ ಮೂರು ಅಡಿಕೆ ಚೀಲ ಕಡಿಮೆ ಕಾಣಿಸಿದೆ. ಗೋದಾಮಿನ ಬಾಗಿಲ ಲಾಕ್ ಮುರಿದ ಕಳ್ಳರು ಒಳಗೆ ನುಗ್ಗಿ ಅಡಿಕೆ ಚೀಲ ಅಪಹರಿಸಿದ್ದಾರೆ. ಅದರಿಂದ ರಾಮಕೃಷ್ಣ ಹರಿಮನೆ ಅವರಿಗೆ 90 ಸಾವಿರ ರೂ ನಷ್ಟವಾಗಿದೆ.
ಅಡಿಕೆ ಕದ್ದವರು ಯಾರು? ಎಂದು ರಾಮಕೃಷ್ಣ ಹರಿಮನೆ ಅವರಿಗೆ ಗೊತ್ತಾಗಿಲ್ಲ. ಊರಿನಲ್ಲಿ ಎಲ್ಲಾ ಕಡೆ ವಿಚಾರಿಸಿದರೂ ಕಳ್ಳರ ಸುಳಿವು ಸಿಕ್ಕಿಲ್ಲ. ಹೀಗಾಗಿ ಈ ಕಳ್ಳತನದ ಬಗ್ಗೆ ಅವರು ಅಂಕೋಲಾ ಪೊಲೀಸರಿಗೆ ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.