ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತರು ಬೈಕ್ ಚಲಾಯಿಸುತ್ತಿದ್ದು, ಆ ಕುರಿತು ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ. ಕಳೆದ 9 ತಿಂಗಳ ಅವಧಿಯಲ್ಲಿ ಬಾಲಕರಿಗೆ ಬೈಕ್ ನೀಡಿದ ಪಾಲಕರಿಗೆ ಕೋರ್ಟು ಒಟ್ಟು 13 ಲಕ್ಷ ರೂ ದಂಡ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಅಪ್ರಾಪ್ತರು ವಾಹನ ಓಡಿಸುತ್ತಿದ್ದಾರೆ. ಈ ಬಗ್ಗೆ ಮೊದಲು ಪೊಲೀಸರು ಜಾಗೃತಿ ಅಭಿಯಾನ ನಡೆಸಿದ್ದು, ಆ ವೇಳೆ ತಿದ್ದುಕೊಳ್ಳದವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿದ ಪ್ರಕರಣ ನ್ಯಾಯಾಲಯಕ್ಕೆ ಹೋಗಿದ್ದು, ವಿವಿಧ ಪ್ರಕರಣಗಳಲ್ಲಿ ನ್ಯಾಯಾಧೀಶರು 25 ಸಾವಿರ ರೂ ದಂಡ ವಿಧಿಸಿದ್ದಾರೆ. ಕಳೆದ 9 ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು 131 ಅಪ್ರಾಪ್ತರ ವಾಹನ ಚಾಲನೆ ಪ್ರಕರಣ ಪತ್ತೆ ಮಾಡಿದ್ದಾರೆ. ಈ ಎಲ್ಲಾ ಪ್ರಕರಣ ಸೇರಿ ನ್ಯಾಯಾಲಯ 13,09,000ರೂ ದಂಡವಿಧಿಸಿದೆ. ಬಾಲಕರಿಗೆ ವಾಹನ ನೀಡಿದ ತಪ್ಪಿಗೆ ಪಾಲಕರು ಈ ದಂಡ ಪಾವತಿ ಮಾಡಿದ್ದಾರೆ.
ಅಂಕಿ-ಅoಶಗಳ ಪ್ರಕಾರ ಭಟ್ಕಳದಲ್ಲಿಯೇ ಅತಿ ಹೆಚ್ಚು ಅಪ್ರಾಪ್ತರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಭಟ್ಕಳ ಶಹರ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಸೇರಿ 45 ಕೇಸುಗಳು ದಾಖಲಾಗಿವೆ. ಭಟ್ಕಳದಿಂದಲೇ ಒಟ್ಟು 5,38,500 ರೂ ದಂಡ ವಸೂಲಿಯಾಗಿದೆ. `ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡುವುದರಿಂದ ಅವರ ಜೊತೆ ಬೇರೆಯವರ ಜೀವಕ್ಕೂ ಅಪಾಯವಿದೆ. ಹೀಗಾಗಿ ಪೋಷಕರು ಬಾಲಕರಿಗೆ ವಾಹನ ನೀಡಬಾರದು’ ಎಂದು ಪೊಲೀಸರು ಸೂಚಿಸಿದ್ದಾರೆ.