ಚಾಕು-ಚೂರಿ ಹಿಡಿದು ಬಂದ ಮೂವರು ಮುಸುಕುದಾರಿಗಳು ಮೂಲೆಗುಡ್ಕಲ್’ನ ರಾಮಚಂದ್ರ ಭಟ್ಟ ಅವರ ಮನೆಗೆ ನುಗ್ಗಿದ್ದು, ಮನೆಯವರಿಗೆ ಹೊಡೆದು ಅಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ. ಮನೆಯಲ್ಲಿದ್ದ ಬಂಗಾರದ ಜೊತೆ ಬೆಳ್ಳಿ ಆಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಯಲ್ಲಾಪುರದ ಹುಟಕಮನೆ ಬಳಿಯ ಮೂಲೆಗುಂಡ್ಕಲ್ ಬಳಿ ರಾಮಚಂದ್ರ ಮಹಾಬಲೇಶ್ವರ ಭಟ್ಟ ಅವರು ವಾಸವಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡು ಅವರು ಕುಟುಂಬ ನಿರ್ವಹಣೆ ಮಾಡಿಕೊಂಡಿದ್ದಾರೆ. ಕಾಡಂಚಿನ ಒಂಟಿ ಮನೆಯಲ್ಲಿ ಅವರು ವಾಸವಾಗಿದ್ದು, ಆ ಮನೆಯನ್ನು ಗುರಿಯಾಗಿರಿಸಿಕೊಂಡು ಡಕಾಯಿತರು ದಾಳಿ ಮಾಡಿದ್ದಾರೆ. ಕಳೆದ ಸೋಮವಾರ ದಾಳಿಗೆ ಸಂಚು ರೂಪಿಸಿದ್ದ ಡಕಾಯಿತರು ಆ ವೇಳೆ ಪೊಲೀಸರು ಬಂದ ಕಾರಣ ತಪ್ಪಿಸಿಕೊಂಡಿದ್ದು, ಗುರುವಾರ ರಾತ್ರಿ ಮತ್ತೊಮ್ಮೆ ಮನೆಗೆ ನುಗ್ಗಿ ಅಲ್ಲಿದ್ದ ಹಣ-ಆಭರಣ ದೋಚಿದ್ದಾರೆ.
ಗುರುವಾರ ರಾತ್ರಿ 9 ಗಂಟೆ ವೇಳೆಗೆ ರಾಮಚಂದ್ರ ಭಟ್ಟ ಅವರ ಮನೆಗೆ ಡಕಾಯಿತರು ನುಗ್ಗಿದ್ದಾರೆ. ಬಾಗಿಲು ಬಡಿದ ಅವರು `ನಾಗರಾಜ್ ಎಂಬಾತರನ್ನು ಹುಡುಕಿ ಬಂದಿದ್ದೇವೆ. ಆತ ಇಲ್ಲಿದ್ದಾನೆಯೇ?’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಾಮಚಂದ್ರ ಭಟ್ಟ ಅವರು ಊಟ ಮುಗಿಸಿ ಕೈ ತೊಳೆಯಲು ಹೋಗಿದ್ದು, ಆಗ ಮನೆ ಹಿಂದಿನ ಬಾಗಿಲಿನಿಂದ ಬಂದ ಅಪರಿಚಿತರೊಬ್ಬರು ರಾಮಚಂದ್ರ ಭಟ್ಟ ಅವರ ಮೇಲೆ ದಾಳಿ ನಡೆಸಿದ್ದಾರೆ. ಅದಾದ ನಂತರ ಮನೆಯಲ್ಲಿದ್ದ ಎಲ್ಲರಿಗೂ ಚಾಕು ತೋರಿಸಿ ಅಡುಗೆ ಮನೆಯಲ್ಲಿಯೇ ಬಂಧಿಸಿದ್ದು, ಮತ್ತಿಬ್ಬರು ಡಕಾಯಿತರು ಮನೆ ಮುಂದಿನ ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ.
ಈ ವೇಳೆ ಅಡುಗೆ ಮನೆಯಲ್ಲಿದ್ದ ಡಕಾಯಿತ ಮನೆಯಲ್ಲಿದ್ದವರಿಗೆ ಅಲ್ಲಿಂದ ಹೊರಗೆ ಹೋಗಲು ಬಿಡಲಿಲ್ಲ. 20 ನಿಮಿಷಗಳ ಕಾಲ ಮನೆ ಶೋಧಿಸಿದ ಉಳಿದಿಬ್ಬರು ಡಕಾಯಿತರು ಅಲ್ಲಿದ್ದ ಕರಿಮಣಿ ಸರ, ಬಂಗಾರದ ಬಳೆ, ಉಂಗುರ, ಲಾಕೆಟ್, ಎರಡು ಕೈ ಗಡಿಯಾರದ ಜೊತೆ ಅಲ್ಲಿದ್ದ 10 ಸಾವಿರ ರೂ ಹಣ ಎಗರಿಸಿದ್ದಾರೆ. ಜೊತೆಗೆ ಮನೆಯಲ್ಲಿದ್ದ 2 ಸಾವಿರ ರೂ ಚಿಲ್ಲರೆ ಹಣವನ್ನು ಬಿಡದೇ ಜೇಬಿಗಿಳಿಸಿದ್ದಾರೆ. ಮನೆಯಿಂದ ಹೊರ ಬೀಳುವ ವೇಳೆ ಡಕಾಯಿತರಿಗೆ ಎರಡು ಮೊಬೈಲ್ ಕಾಣಿಸಿದ್ದು, ಅದನ್ನು ಸಹ ಅವರು ಕೊಂಡೊಯ್ದಿದ್ದಾರೆ. ಮನೆಯಿಂದ ಹೊರ ಬಿದ್ದಾಗ ಅಂಗಳದಲ್ಲಿದ್ದ ರಾಮಚಂದ್ರ ಭಟ್ಟ ಅವರ ಬೈಕನ್ನು ಒಯ್ದಿದ್ದು, ಯಲ್ಲಾಪುರದ ನಿಸರ್ಗಮನೆ ತಿರುವಿನಲ್ಲಿ ಆ ಬೈಕ್ ಬಿಟ್ಟು ಮೂವರು ಪರಾರಿಯಾಗಿದ್ದಾರೆ.
ಅಜ್ಜಿಯ ಬಂಗಾರ ಮುಟ್ಟಿಲ್ಲ!
ಅಡುಗೆ ಮನೆಯಲ್ಲಿ ಚಾಕು ತೋರಿಸಿ ಎಲ್ಲರನ್ನು ಬೆದರಿಸಿದ್ದ ಡಕಾಯಿತ ರಾಮಚಂದ್ರ ಭಟ್ಟ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು ಡಕಾಯಿತನಿಗೆ ಎರಡು ಏಟು ಬಾರಿಸಿದ್ದು, ಆಗ ಕಳ್ಳನ ಮುಖ ಮುಚ್ಚಿದ್ದ ಮಾಸ್ಕ್ ಕಳಚಿಬಿದ್ದಿದೆ. ಆದರೆ, ಕುಟುಂಬದವರಿoದ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ. ಇನ್ನೂ ಆ ಮನೆಯಲ್ಲಿದ್ದ ಅಜ್ಜಿಯನ್ನು ಕೂರ್ಚಿ ಮೇಲೆ ಕೂರಿಸಿದ ಆತ `ನೀವು ನನ್ನ ತಾಯಿ ಇದ್ದ ಹಾಗೇ. ನಿಮಗೆ ಏನೂ ಮಾಡಲ್ಲ’ ಎಂದು ಆಶ್ವಾಸನೆ ನೀಡಿದ್ದಾರೆ. ಅಜ್ಜಿಯ ಕೊರಳಿನಲ್ಲಿದ್ದ ಬಂಗಾರ ನೋಡಿದರೂ ಸಹ ಅದನ್ನು ಆ ಕಳ್ಳ ಮುಟ್ಟಿಲ್ಲ. ಮತ್ತೊಬ್ಬ ಮಹಿಳೆಯ ಕೊರಳಿನಲ್ಲಿದ್ದ ಬಂಗಾರವನ್ನು ಸಹ ಆತ ತೆಗೆದಿಲ್ಲ. ಮನೆಯಲ್ಲಿದ್ದ ವಿವಿಧ ವಸ್ತುಗಳನ್ನು ನೋಡಿದ ಡಕಾಯಿತ ಅದು ಏನು? ಇದು ಏನು? ಎಂದು ಪ್ರಶ್ನಿಸಿದ್ದು, ಚಾಕು ನೋಡಿದ ಕುಟುಂಬದವರು ಭಯದಿಂದಲೇ ಕೆಲ ಉತ್ತರ ನೀಡಿದ್ದಾರೆ.
ಮೂರು ದಿನದ ಹಿಂದೆಯೇ ಬಂದಿದ್ದರು!
ಈ ಮೂವರು ಮುಸುಕುದಾರಿಗಳು ಮೂರು ದಿನದ ಹಿಂದೆಯೇ ದರೋಡೆ ಪ್ರಯತ್ನ ಮಾಡಿದ್ದರು. ಸೋಮವಾರ ರಾತ್ರಿ ಅವರು ತೋಟದ ಅಂಚಿನಲ್ಲಿ ಸುತ್ತಾಡುತ್ತಿರುವುದನ್ನು ನೋಡಿ ಅಲ್ಲಿನವರೇ ರಾಮಚಂದ್ರ ಭಟ್ಟ ಅವರ ಮನೆಗೆ ಸುದ್ದಿ ಮುಟ್ಟಿಸಿದ್ದರು. ಆಗ, ಕುಟುಂಬದವರು 112ಗೆ ಫೋನ್ ಮಾಡಿದ್ದು, ಪೊಲೀಸರು ಬರುವುದನ್ನು ನೋಡಿ ಡಕಾಯಿತರು ಪರಾರಿಯಾಗಿದ್ದರು. ಕಳ್ಳರ ಆಗಮನದ ಹಿನ್ನಲೆ ರಾಮಚಂದ್ರ ಭಟ್ಟ ಅವರು ಮನೆ ಭದ್ರತೆ ಹೆಚ್ಚಿಸಿದ್ದು, ಊರಿನ ಕೆಲ ಹುಡುಗರಿಗೆ ರಾತ್ರಿ ಮನೆ ಕಾವಲಿಗೆ ನೇಮಿಸಿದ್ದರು. ಆದರೆ, ಮನೆ ಕಾವಲಿಗೆ ಬರುವವರು 10ಗಂಟೆಗೆ ಬರುತ್ತಿದ್ದು, 9 ಗಂಟೆಗೆ ಬಂದ ಮುಸುಕುದಾರಿಗಳು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಚಿರತೆಗೆ ಬಲಿಯಾದ ನಾಯಿ!
ರಾಮಚಂದ್ರ ಭಟ್ಟ ಅವರ ಮನೆಯಲ್ಲಿ ಕಟ್ಟುಮಸ್ತಾದ ನಾಯಿ ಇದ್ದು, ಕೆಲ ದಿನಗಳ ಹಿಂದೆ ಅದು ಚಿರತೆಗೆ ಆಹಾರವಾಗಿತ್ತು. ಇನ್ನೊಂದು ನಾಯಿಯೂ ಅವರ ಮನೆಯಲ್ಲಿದ್ದು ಸೋಮವಾರ ರಾತ್ರಿ ಅದು ಕಳ್ಳರನ್ನು ನೋಡಿ ಬೊಗಳಿತ್ತು. ಆದರೆ, ಚಿರತೆ ಭಯದಿಂದ ಗುರುವಾರ ರಾತ್ರಿ ಆ ನಾಯಿಯನ್ನು ಪಂಚರದಲ್ಲಿ ಬಂಧಿಸಿದ್ದು ಡಕಾಯಿತರು ಬರುವ ಸುಳಿವು ಸಿಕ್ಕಿಲ್ಲ. ಸದ್ಯ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಭೇಟಿ ನೀಡಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಅವರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಕ್ಕೆ ಬಂದಿದ್ದಾರೆ.
`ಕುಟುಂಬದವರ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಹಾಕಿಸುವುದು ಒಳಿತು’ ಎಂದು ಪೊಲೀಸರು ಸೂಚಿಸಿದ್ದಾರೆ.