ಹೆದ್ದಾರಿ ಹೊಂಡದ ವಿರುದ್ಧ ಜನಶಕ್ತಿ ವೇದಿಕೆಯವರು ಪ್ರತಿಭಟನೆ ನಡೆಸಿ ಅಲ್ಲಿನ ಹೊಂಡಗಳಿಗೆ ಪಿಂಡ ಬಿಟ್ಟಿದ್ದು, ಅದಾದ ನಂತರ ಹೆದ್ದಾರಿ ನಿರ್ವಹಣೆಯ ಗುತ್ತಿಗೆದಾರ ಅಂಕೋಲಾಗೆ ಆಗಮಿಸಿದ್ದಾರೆ. ಗುತ್ತಿಗೆ ಕಂಪನಿ ಪರವಾಗಿ ಬಂದಿರುವ ಎನ್ ಬಿ ರೆಡ್ಡಿ ಹಾಗೂ ಸುಧಾಕರ ಎಂಬಾತರು ಹಾಳಾದ ಹೆದ್ದಾರಿಗೆ ತೇಪೆ ಹಚ್ಚುವ ಚರ್ಚೆ ಮಾಡಿದ್ದಾರೆ.
ರಾಷ್ಟಿಯ ಹೆದ್ದಾರಿ ಅವ್ಯವಸ್ಥೆಯ ವಿರುದ್ಧ ಭಾನುವಾರ ಜನಶಕ್ತಿ ವೇದಿಕೆ ಹಾಗೂ ಲಾರಿ ಮಾಲಕರ ಸಂಘದವರು ಪ್ರತಿಭಟನೆ ನಡೆಸಿದ್ದರು. ವಿವಿಧ ಸಂಘ-ಸoಸ್ಥೆಗಳು ಈ ಧರಣಿಗೆ ಕೈ ಜೋಡಿಸಿದ್ದರು. ಹೆದ್ದಾರಿ ಹೊಂಡಕ್ಕೆ ಪಿಂಡ ಬಿಟ್ಟು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದರು. ಈ ವಿಷಯ ಅರಿತು ಅಧಿಕಾರಿಗಳು ಹಾಗೂ ಹೆದ್ದಾರಿ ನಿರ್ವಹಣೆ ಗುತ್ತಿಗೆಯ ಪ್ರಮುಖರು ಸ್ಥಳಕ್ಕೆ ಹಾಜರಾಗಿದ್ದಾರೆ. ಹೆದ್ದಾರಿ ಎಲ್ಲೆಲ್ಲಿ ಹಾಳಾಗಿದೆ? ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ? ಎಂದು ಅವರು ಸ್ವತಃ ನಿಂತು ಗಮನಿಸಿದ್ದಾರೆ.
ಬಾಳೆಗುಳಿ ಕ್ರಾಸಿನಿಂದ ಮಾಸ್ತಿಕಟ್ಟಾದವರೆಗೆ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದೆ. ಕಳೆದ ಮೂರು ವರ್ಷಗಳಿಂದ ಹೆದ್ದಾರಿ ನಿರ್ವಹಣೆ ಸರಿಯಾಗಿಲ್ಲ. ಸಾಕಷ್ಟು ಬಾರಿ ದುರಸ್ಥಿಗೆ ಆಗ್ರಹಿಸಿದರೂ ಅದನ್ನು ರಿಪೇರಿ ಮಾಡಿದವರಿಲ್ಲ. ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿ ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಅದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಎಲ್ಲಾ ಹಿನ್ನಲೆ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯ ಬಿಸಿ ಅಧಿಕಾರಿಗಳಿಗೆ ಮುಟ್ಟಿದೆ. ಗುತ್ತಿಗೆದಾರರ ಜೊತೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.