ಜಾತಿ ಪ್ರಮಾಣ ಪತ್ರ ನೀಡಲು 15 ವರ್ಷ ಕಾಡಿಸಿದ ಆಡಳಿತ ವರ್ಗಕ್ಕೆ ಹೈಕೋರ್ಟು ಛೀಮಾರಿ ಹಾಕಿದೆ. ಈ ವಿಷಯವಾಗಿ ಉತ್ತರ ಕನ್ನಡ ಜಿಲ್ಲಾಡಳಿತಕ್ಕೂ ಹೈಕೋರ್ಟು ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕ್ಯಾಥ್ ಲ್ಯಾಬ್ ವಿಭಾಗದಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸಿಂಗ್ ಅಧಿಕಾರಿ ಅನುಸೂಯಾ ಪಿ ಕೋಟಿ ಸಲ್ಲಿಸಿರುವ ರಿಟ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಧಾರವಾಡದ ದ್ವಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದೆ. `ಜಾತಿ ಪ್ರಮಾಣ ಪತ್ರದ ಕಾರಣಕ್ಕಾಗಿಯೇ ಮೇಲ್ಮನವಿದಾರರಿಗೆ ಕಳೆದ ಒಂದು ವರ್ಷದಿಂದ ಪೂರ್ಣ ಪ್ರಮಾಣದ ಸಂಬಳ ಪಾವತಿ ಆಗಿಲ್ಲ’ ಎಂಬ ಆಕ್ಷೇಪಣೆಯನ್ನು ನ್ಯಾಯಪೀಠ ಗಮನಿಸಿದೆ. `ಅನುಸೂಯಾ ಪಿ ಕೋಟಿ ಅವರಿಗೆ ಸಮಾನವಾಗಿ ಕರ್ತವ್ಯ ನಿರ್ವಹಿಸುವ ಮತ್ತೊಬ್ಬ ಉದ್ಯೋಗಿ 36 ಸಾವಿರದಿಂದ 67,550ರವರೆಗಿನ ವೇತನ ಶ್ರೇಣಿಯಲಿದ್ದಾರೆ. ಆದರೆ, ಅನುಸೂಯಾ ಅವರಿಗೆ ತಿಂಗಳಿಗೆ 10 ಸಾವಿರದಷ್ಟು ಮಾತ್ರ ವೇತನ ಪಾವತಿ ಆಗುತ್ತಿದೆ. ಇದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
`ಒಬ್ಬ ಉದ್ಯೋಗಿಯ ಕಾನೂನುಬದ್ಧ ಹಕ್ಕನ್ನು ತಳ್ಳಿಹಾಕಿ ಅವರನ್ನು ಶಾಶ್ವತವಾದ ಆರ್ಥಿಕ ಅನಾನುಕೂಲತೆಗೆ ಗುರಿಪಡಿಸಲು ಸಾಧ್ಯವಿಲ್ಲ. ಅವರ ಜೀವನೋಪಾಯ ಮತ್ತು ಘನತೆಗೆ ಸಂಬAಧಿಸಿದ ಪ್ರಶ್ನೆ ಎದುರಾದಾಗ ಕೋರ್ಟ ಕಣ್ಮುಚ್ಚಿ ಕೂರಲು ಆಗದು’ ಎಂದು ಸಹ ಹೇಳಿದೆ. `ಅಧಿಕಾರಿಗಳ ದೀರ್ಘಕಾಲದ ನಿಷ್ಕ್ರಿಯತೆಯಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಒಬ್ಬ ಉದ್ಯೋಗಿ ಏಕೆ ಹೊರಬೇಕು? ಇದಕ್ಕೆ ಕಾರಣರಾದ ಅಧಿಕಾರಿಗಳಿಂದಲೇ ಈ ಮೊತ್ತವನ್ನು ಏಕೆ ವಸೂಲಿ ಮಾಡಬಾರದು? ಎಂದು ಸಹ ನ್ಯಾಯಪೀಠ ಪ್ರಶ್ನಿಸಿದೆ. `ಮೇಲಿಂದ ಮೇಲೆ ನೀಡಲಾದ ನ್ಯಾಯಾಂಗ ಆದೇಶಗಳ ಅನುಪಾಲನೆಗೆ ವಿಳಂಬ ಮಾಡಿರುವುದು ಕೋರ್ಟ್ ಅಂತಃಸಾಕ್ಷಿಯನ್ನೇ ಕಲಕುವಂತಿದೆ. ಹಾಗಾಗಿ, ಈ ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನದಿಂದ ನಾಲ್ಕು ವಾರಗಳ ಅವಧಿಯಲ್ಲಿ ಅರ್ಜಿದಾರರು ಮೊಗೇರ ಜಾತಿಗೆ ಸೇರಿದವರು ಎಂಬುದರ ಜಾತಿ ಮಾನ್ಯತಾ ಪ್ರಮಾಣ ಪತ್ರವನ್ನು ನೀಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರಿಗೆ ನ್ಯಾಯಾಲಯ ಆದೇಶಿಸಿದೆ.
`ತನ್ನ ಕೆಲಸದ ಅಮೂಲ್ಯ ಸಮಯವನ್ನು ರೋಗಿಗಳು ಮತ್ತು ಬಳಲುತ್ತಿರುವವರ ಆರೈಕೆಗಾಗಿ ಮೀಸಲಿಡುವ ನರ್ಸ ಒಬ್ಬರು ತಮ್ಮ ಕಾನೂನುಬದ್ಧ ಸೇವಾ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಹೆಣಗಾಡುತ್ತಿರುವುದು ಚೋದ್ಯದ ಸಂಗತಿ’ ಎಂದು ನ್ಯಾಯಪೀಠ ಕಿಡಿ ಕಾರಿದೆ. ಪ್ರತಿವಾದಿಗಳಾದ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಮತ್ತು ಜಾತಿ ಸಿಂಧುತ್ವ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಅಕ್ಟೊಬರ್ 29ಕ್ಕೆ ಮುಂದೂಡಿದೆ.