ಕಾಳಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಮೊಸಳೆಯಿರುವ ದಿಕ್ಕಿನ ಕಡೆಯೇ ಮನುಷ್ಯರು ರಾಪ್ಟಿಂಗ್ ಮಾಡಿದ್ದಾರೆ. ಐವರು ಪ್ರವಾಸಿಗರು ಮೊಸಳೆಯ ಸಮೀಪ ಹೋದ ದೃಶ್ಯಾವಳಿಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜೊಯಿಡಾದ ಗಣೇಶಗುಡಿ-ಇಳವಾ ಭಾಗದ ಕಾಳಿ ನದಿಯಲ್ಲಿ ರಾಪ್ಟಿಂಗ್ ಚಟುವಟಿಕೆ ನಡೆಯುತ್ತಿದೆ. ಈ ಭಾಗದಲ್ಲಿಯೇ ದೊಡ್ಡ ಮೊಸಳೆಯೊಂದು ನದಿಯಲ್ಲಿ ಕಾಣಿಸಿಕೊಂಡಿದೆ. ಅದಾಗಿಯೂ, ಐವರು ಪ್ರವಾಸಿಗರು ಅಲ್ಲಿಯೇ ರಾಪ್ಟಿಂಗ್ ಮಾಡಿದ್ದಾರೆ. ಸಮೀಪದ ಸೇತುವೆಯ ಮೇಲಿದ್ದ ಸ್ಥಳೀಯರು ಅಲ್ಲಿ ಮೊಸಳೆಯಿರುವ ಬಗ್ಗೆ ರಾಪ್ಟಿಂಗ್ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ಅದಾಗಿಯೂ, ರಾಪ್ಟಿಂಗ್ ದೋಣಿ ಅದೇ ಭಾಗದಲ್ಲಿ ಸಂಚರಿಸಿದೆ. ಮೊಸಳೆಯ ಚಲನ-ವಲನವನ್ನು ಇನ್ನಿತರರು ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಅದನ್ನು ನೋಡಿದ ನಂತರ ರಾಪ್ಟಿಂಗ್ ದೋಣಿ ಚಾಲಕ ದಿಕ್ಕು ಬದಲಿಸಿರುವುದು ಗಮನಕ್ಕೆ ಬಂದಿದೆ.
ಕಾಳಿ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಮೊಸಳೆಗಳಿದ್ದು, ಸಮೀಪ ಹೋಗುವವರಿಗೆ ಅಪಾಯದ ಸಾಧ್ಯತೆಯಿದೆ. ಆದರೆ, ಪ್ರವಾಸಿಗರು ಅಪಾಯದ ಮುನ್ಸೂಚನೆ ಇಲ್ಲದೇ ನದಿಗೆ ಇಳಿಯುತ್ತಿದ್ದಾರೆ. ನದಿಯಲ್ಲಿ ಕೆಲವರು ಈಜುವುದು ಸಹ ಕಾಣಿಸುತ್ತಿದೆ. `ದಾಂಡೇಲಿಯಲ್ಲಿ ಕೈಗೊಂಡಿರುವ ಮಾದರಿಯಲ್ಲೇ ಗಣೇಶಗುಡಿ – ಇಳವಾ ಭಾಗದಲ್ಲಿಯೂ ಅಗತ್ಯ ಸ್ಥಳಗಳಲ್ಲಿ ಕಬ್ಬಿಣದ ಬೇಲಿ ಅಳವಡಿಸಿ, ಪ್ರವಾಸಿಗರು ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ತಡೆಯಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ