ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಹಾಗೂ ಅವರ ಪತ್ನಿ ಜಲಜಾಕ್ಷಿ ನಾಯಕ ಅವರ ವಿರುದ್ಧ ಭೂ ಅಕ್ರಮದ ಆರೋಪ ಕೇಳಿ ಬಂದಿದೆ. ದಾಂಡೇಲಿಯಲ್ಲಿ ಎರಡು ಕಟ್ಟಡ ಹಾಗೂ ಒಂದು ವಾಣಿಜ್ಯ ಮಳಿಗೆ ಹೊಂದಿರುವ ಜೊಯಿಡಾದ ವೆಂಕಟೇಶ್ ಭೂಪಾನಿ ಅವರು ಈ ಆರೋಪ ಮಾಡಿದ್ದು, `ತಮ್ಮ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಬಿ ಎನ್ ವಾಸರೆ ಹಾಗೂ ಅವರ ಪತ್ನಿ ಜಲಜಾಕ್ಷಿ ನಾಯಕ ಅವರು ಆಸ್ತಿ ಲಟಪಾಯಿಸಿದ್ದಾರೆ’ ಎಂದು ದೂರಿದ್ದಾರೆ.
ಬಿ ಎನ್ ವಾಸರೆ ಅವರ ವಿರುದ್ಧ ಕಳೆದ ಮೂರು ವರ್ಷಗಳಿಂದ ಭೂ ಅಕ್ರಮದ ಆರೋಪ ಕೇಳಿ ಬಂದಿದೆ. ಅವರ ಕುಟುಂಬದ ಹೆಸರಿನಲ್ಲಿ ಖರೀದಿಯಾದ ಭೂಮಿಯ ವಿಷಯವಾಗಿ ದೊಡ್ಡ ವಿವಾದ ಸೃಷ್ಠಿಯಾಗಿದ್ದು, ಅದು ಲೋಕಾಯುಕ್ತ ಕಚೇರಿಯನ್ನು ತಲುಪಿದೆ. ಸದ್ಯ ಅದೇ ವಿಷಯವಾಗಿ ದಾಂಡೇಲಿಯಲ್ಲಿ ಪೊಲೀಸ್ ದೂರು ದಾಖಲಾಗಿದೆ. `ನಮ್ಮ ವಿರುದ್ಧ ದಾಖಲಾದ ದೂರು ದುರುದ್ದೇಶಪೂರಿತ’ ಎಂದು ಬಿ ಎನ್ ವಾಸರೆ ಅವರು ಪ್ರತಿಕ್ರಿಯಿಸಿದ್ದಾರೆ. ನಾವು ಯಾರಿಗೂ ಮೋಸ ಮಾಡಿ ಜಮೀನು ಖರೀದಿಸಿಲ್ಲ. ಜಮೀನು ಮಾರಾಟ ಮಾಡಿದ ವ್ಯಕ್ತಿಯೇ ಕೇಸು ದಾಖಲಿಸಿದ್ದು ವಿಪರ್ಯಾಸ’ ಎಂದು ಸಹ ಹೇಳಿದ್ದಾರೆ.
ಜೊಯಿಡಾ ಕೊಂಡಪಾದ ಬರ್ಜಿಯ ವೆಂಕಟೇಶ @ ಸ್ವಾಮಿ ಸುಬ್ಬಯ್ಯ ಭೂಪಾನಿ ಅವರು ದಾಂಡೇಲಿಯಲ್ಲಿ ಎರಡು ಕಟ್ಟಡದ ಮಾಲಕರಾಗಿದ್ದಾರೆ. ಅದನ್ನು ಅವರು ಬಾಡಿಗೆಗೆ ಬಿಟ್ಟಿದ್ದಾರೆ. ಅದರೊಂದಿಗೆ ಒಂದು ಹಾಲಿನ ಮಳಿಗೆಯನ್ನು ಹೊಂದಿದ್ದಾರೆ. ಹೀಗಿರುವಾಗ ಅವರು ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಆಶ್ರಯ ವಸತಿ ನಿವೇಶನಪಡೆದಿದ್ದಾರೆ. ಆ ನಿವೇಶನವನ್ನು ಅವರು ಬೊಮ್ಮಯ್ಯ ನಾರಾಯಣ ನಾಯಕ (ಬಿ ಎನ್ ವಾಸರೆ) ಅವರ ಪತ್ನಿ ಜಲಜಾಕ್ಷಿ ನಾಯಕ ಅವರಿಗೆ ಮಾರಾಟ ಮಾಡಿದ್ದಾರೆ. ಈ ಹಿಂದೆಯೂ ಬೇರೆ ಬೇರೆಯವರ ಮೂಲಕ ಆರೋಪ ಮಾಡಿಸಿದ್ದ ಅವರು ಸದ್ಯ ಸ್ವತಃ ಈ ಬಗ್ಗೆ ಪೊಲೀಸ್ ಹೇಳಿಕೆ ನೀಡಿದ್ದಾರೆ. `ಪತ್ರಕರ್ತ ಹಾಗೂ ಕಸಾಪ ಅಧ್ಯಕ್ಷರೂ ಆಗಿರುವ ಬಿ ಎನ್ ವಾಸರೆ ಅವರು ನಗರಸಭೆ ಅಧಿಕಾರಿ ಹಾಗೂ ನೋಂದಣಾಧಿಕಾರಿ ಕಚೇರಿಯವರ ಮೇಲೆ ತಮ್ಮ ಪ್ರಭಾವ ಬೀರಿ ಭೂಮಿ ಕಬಳಿಸಿದ್ದಾರೆ’ ಎಂದವರು ದೂರಿದ್ದಾರೆ.
`ಬಿ ಎನ್ ವಾಸರೆ ಅವರು ತಮ್ಮೊಂದಿಗೆ ಸೌಹಾರ್ದಯುತವಾಗಿದ್ದು, ನಮ್ಮ ಹೆಸರಿನಲ್ಲಿ 10 ಸಾವಿರ ರೂ ಭರಣ ಮಾಡಿ ನಿವೇಶನ ಪಡೆದಿದ್ದರು. ನಿವೇಶನ ನಮ್ಮ ಹೆಸರಿಗೆ ಆದ 4 ದಿನದಲ್ಲಿ ಆರ್ಥಿಕ ಸಂಕಷ್ಟದ ಕಾರಣ ಅದನ್ನು ನಾವು ಮಾರಾಟ ಮಾಡುವುದಾಗಿ ಬರೆಯಿಸಿಕೊಂಡು 1.95 ಲಕ್ಷ ರೂಪಾಯಿಗೆ ಅದನ್ನು ಖರೀದಿಸಿದ ಹಾಗೇ ದಾಖಲೆ ಸೃಷ್ಠಿಸಿದ್ದಾರೆ. ನಮ್ಮನ್ನು ಹಳಿಯಾಳ ಸಬ್ ರಿಜಿಸ್ಟರ್ ಕಚೇರಿಗೆ ಕರೆದೊಯ್ದು ನೋಂದಣಿ ಮಾಡಿಸಿದ್ದಾರೆ. ಅವರು ಸುಳ್ಳು ದಾಖಲೆ ಸೃಷ್ಠಿಸಿ ನಿವೇಶನಪಡೆದಿದ್ದು, ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ’ ಎಂದು ವೆಂಕಟೇಶ್ ಭೂಪಾನಿ ಅವರು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿ ಎನ್ ವಾಸರೆ ಅವರು `ನಾವು ಯಾರಿಗೂ ಮೋಸ ಮಾಡಿಲ್ಲ. ಜಮೀನು ಮಾರಾಟದ ವಿಷಯ ತಿಳಿದು ಅದನ್ನು ಖರೀದಿಸಿದ್ದು, ನಮಗೂ ಕಾನೂನು ಹೋರಾಟ ಅನಿವಾರ್ಯ. ಇಲ್ಲಿ ಅನಗತ್ಯವಾಗಿ ಸಾಹಿತ್ಯ ಪರಿಷತ್ ಹೆಸರು ಎಳೆದು ತರಲಾಗಿದ್ದು, ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಪ್ರಭಾವ ಬೀರಿದ್ದೇನೆ ಎನ್ನುವುದಕ್ಕೆ ಭೂಮಿ ಖರೀದಿ ವೇಳೆ ನಾನು ಸಾಹಿತ್ಯ ಪರಿಷತ್ ಅಧ್ಯಕ್ಷನೂ ಆಗಿರಲಿಲ್ಲ. ಸುಳ್ಳು ಆರೋಪಗಳು ಮುಂದಿನ ಪರಿಷತ್ ಚುನಾವಣೆಯ ಕಾರಣದಿಂದ ನಡೆದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.