ರೇಬಿಸ್ ರೋಗಕ್ಕೆ ಒಳಗಾಗಿದ್ದ ದನವೊಂದು ಗೋಕರ್ಣ ಕಡಲತೀರಕ್ಕೆ ಆಗಮಿಸಿದ್ದು, ಪೊಲೀಸ್ ಸಿಬ್ಬಂದಿ ದೇವರಾಯ ನಾಯಕ ಅವರು ಧೈರ್ಯದಿಂದ ಆ ದನ ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ಅಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಕಳೆದ ಎರಡು ದಿನಗಳಿಂದ ಹುಚ್ಚು ದನವೊಂದು ಓಡಾಡುತ್ತಿತ್ತು. ಅಲ್ಲಿಗೆ ಬರುವ ಪ್ರವಾಸಿಗರ ಮೇಲೆ ಆ ದನ ಎರಗುತ್ತಿತ್ತು. ಗುರುವಾರವೂ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಜೊತೆಗೆ ಇನ್ನೂ ನಾಲ್ವರನ್ನು ಬೆನ್ನಟ್ಟಿ ಬಂದಿತ್ತು.
ಪಶು ಸಿಬ್ಬಂದಿ ಕರೆಯಿಸಿ ದನ ಹಿಡಿಸುವ ಪ್ರಯತ್ನ ನಡೆಯಿತು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಆ ದನ ಬಗ್ಗೆ ಪ್ರವಾಸಿ ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಿ, ಕಾವಲು ಕಾಯುತ್ತಿದ್ದರು. ಶುಕ್ರವಾರ ಬೆಳಗ್ಗೆ ಮತ್ತೆ ದನ ಅಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿಗೆ ಆಗಮಿಸಿದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿತು. ತಕ್ಷಣ ಅವರು ಗ್ರಾಮ ಪಂಚಾಯತಗೆ ಫೋನ್ ಮಾಡಿದ್ದು, ಪಿಡಿಓ ಫೋನ್’ಗೆ ಸಿಗಲಿಲ್ಲ. ಹೀಗಾಗಿ ಅವರು 112ಗೆ ಫೋನ್ ಮಾಡಿದರು.
ಆಗ ಅಲ್ಲಿಗೆ ಆಗಮಿಸಿದ ಹವಲ್ದಾರ್ ದೇವರಾಯ ನಾಯಕ ಅವರು ದನ ಹಿಡಿದರು. 112ನ ಎಸೈ ಮಾರುತಿ ಕೇಣಿ, ಜೀವರಕ್ಷಕ ಸಿಬ್ಬಂದಿ ಶಿವಪ್ರಸಾದ ಅಂಬಿಗ, ಲೋಕು ಹರಿಕಂತ್ರ, ಮೋಹನ ಅಂಬಿಗ ರೋಷನ್ ಎಸ್ ಖಾರ್ಮಿ, ಪ್ರವಾಸಿಮಿತ್ರ ಶೇಖರ ಹರಿಕಂತ್ರ, ಲೈಫ ಗಾರ್ಡ ಮೇಲ್ವಿಚಾರಕ ರವಿ ನಾಯ್ಕ ಅವರು ಈ ಕಾರ್ಯಾಚರಣೆಗೆ ಕೈ ಜೋಡಿಸಿದರು.