ಗೋಕರ್ಣ ಮುಖ್ಯ ಕಡಲ ತೀರದ ಬಳಿ ಆಟವಾಡುತ್ತಿದ್ದ ಬಾಲಕರೊಬ್ಬರಿಗೆ ನಾಗರ ಹಾವು ಕಚ್ಚಿದೆ. ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರ ಜೊತೆ ಡಾ ಶ್ರೀವರ ನಾಯಕ ಹಾಗೂ ಡಾ ಗಿರೀಶ್ ಬೂತೆ ಹಾಗೂ ಡಾ ವಿಶಾಲ್ ಅವರು ಮಗುವಿನ ಜೀವ ಉಳಿಸಲು ಹೋರಾಡುತ್ತಿದ್ದಾರೆ. ಶುಶ್ರೂಷಕಿ ಭೂದೇವಿ, ದೀಪಾ ಅವರು ಸಹ ಮಗುವಿನ ಆರೈಕೆ ಮಾಡಿದ್ದಾರೆ.
ಕಡಲ ತೀರದಲ್ಲಿ ಸಾಮಾನ್ಯವಾಗಿ ಜಲ್ಲಿ ತೊರ್ಕೆ ಸೇರಿ ವಿವಿಧ ವಿಷ ಜಂತುಗಳು ಮನುಷ್ಯರ ಮೇಲೆ ದಾಳಿ ಮಾಡಿದ ಉದಾಹರಣೆಗಳಿದ್ದವು. ಆದರೆ, ವಿಷ ಸರ್ಪ ಕಚ್ಚಿದ ಬಗ್ಗೆ ಉತ್ತರ ಕನ್ನಡದಲ್ಲಿ ಈವರೆಗೆ ಎಲ್ಲಿಯೂ ಪ್ರಕರಣ ದಾಖಲಾಗಿರಲಿಲ್ಲ. ಇದೇ ಮೊದಲ ಬಾರಿಗೆ ಗೋಕರ್ಣದ ಕಡಲತೀರದ ಬಳಿ ನಾಗರ ಹಾವು ಬಾಲಕನಿಗೆ ಕಚ್ಚಿದ್ದು, ಉರಗ ತಜ್ಞ ಬಾಬಣ್ಣ ಅವರು ಆ ಹಾವನ್ನು ಹಿಡಿದಿದ್ದಾರೆ. ಆ ಹಾವಿನ ಗುರುತಿನ ಆಧಾರದಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಗೋಕರ್ಣದಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಬಾಲಕನನ್ನು ಅಂಕೋಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಧಾರವಾಡ ಮೂಲದ ಉದ್ವಿತ್ ಚೇತನ ಎಂಬ 9 ವರ್ಷದ ಬಾಲಕ ಕುಟುಂಬದ ಜೊತೆ ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಕಡಲ ತೀರದ ಬಳಿ ಅವರು ಸಂಚರಿಸುವಾಗ ಅವರಿಗೆ ಹಾವು ಕಚ್ಚಿತು. ಅಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಸೇರಿ ಆ ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ಆಡಳಿತ ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರ ಸೂಚನೆ ಮೇರೆಗೆ ಹಿರೇಗುತ್ತಿ ಆರೋಗ್ಯ ಕೇಂದ್ರದ ವೈದ್ಯ ಡಾ ಶ್ರೀವರ ನಾಯಕ ಹಾಗೂ ಶುಶ್ರೂಷಕಿ ಭೂದೇವಿ, ದೀಪಾ ಪ್ರಥಮ ಚಿಕಿತ್ಸೆ ಶುರು ಮಾಡಿದರು. ಅದಾದ ನಂತರ ಗಣೇಶ ನಾಯಕ ಅವರ ಆಂಬ್ಯುಲೆನ್ಸ್ ಮೂಲಕ ಮಗುವನ್ನು ಅಂಕೋಲಾಗೆ ಕಳುಹಿಸಿದ್ದು, ಡಾ ಗಿರೀಶ್ ಬೂತೆ ಮತ್ತು ಡಾ ವಿಶಾಲ್ ಅವರು ಆರು ಬಗೆಯ ಚುಚ್ಚುಮದ್ದು ನೀಡಿದರು. ಸದ್ಯ ಹಾವಿನ ಕಡಿತಕ್ಕೆ ಒಳಗಾದ ಬಾಲಕ ಆರೋಗ್ಯದ ಮೇಲೆ ವೈದ್ಯರು ನಿಗಾವಹಿಸಿದ್ದಾರೆ.