ರಾಜ್ಯ ಸರ್ಕಾರದ ಎಲ್ಲಾ ನೌಕರರು ರಾತ್ರಿಯೂ ಹಾಜರಾತಿ ಹಾಕುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸ್ಥಾನದಲ್ಲಿ ವಾಸಿಸದೇ ಬೇರೆ ಬೇರೆ ಕಡೆಯಿಂದ ಕರ್ತವ್ಯಕ್ಕೆ ಬರುವವರ ಮೇಲೆ ನಿಗಾವಿರಿಸಿ ಸರ್ಕಾರ ಈ ಆದೇಶ ಮಾಡಿದೆ.
ಎಲ್ಲಾ ಸರ್ಕಾರಿ ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿಯೇ ವಾಸವಾಗಿರಬೇಕು ಎಂಬ ನಿಯಮವಿದೆ. ತುರ್ತು ಸನ್ನಿವೇಶದಲ್ಲಿ ಜನರ ಸೇವೆಗೆ ಲಭ್ಯವಾಗಿರುವಂತೆ ನೋಡಿಕೊಳ್ಳಲು ಸರ್ಕಾರ ಈ ನಿಯಮ ರೂಪಿಸಿದೆ. ಆದರೆ, ಅನೇಕ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಬೇರೆ ಬೇರೆ ಊರುಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಕೆಲವರು ವಾರಕ್ಕೆ ಒಂದೆರಡು ಬಾರಿ ಮಾತ್ರ ಕಚೇರಿಗೆ ಹಾಜರಾಗುತ್ತಿದ್ದು, ರಾತ್ರಿ ವೇಳೆ ಕೇಂದ್ರ ಸ್ಥಾನ ಬಿಟ್ಟು ಬೇರೆ ಕಡೆ ವಾಸಿಸುತ್ತಿದ್ದಾರೆ.
`ಸರ್ಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನ ಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿ ನೆಲಸಿರಬೇಕು’ ಎಂದು ಸರ್ಕಾರ ಪುನರುಚ್ಚಾರ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದಲ್ಲೇ ವಾಸವಿರುವುದನ್ನು ಖಾತ್ರಿಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಆಧಾರಿತ `ಕರ್ತವ್ಯ’ ಎಂಬ ಮೊಬೈಲ್ ಅಪ್ಲಿಕೇಶನ್ ತಂದಿದ್ದು, ಅದರಲ್ಲಿಯೇ ಅಧಿಕಾರಿ-ಸಿಬ್ಬಂದಿ ರಾತ್ರಿಯೂ ಹಾಜರಾತಿ ಹಾಕಬೇಕು ಎಂದು ಸೂಚಿಸಲಾಗಿದೆ.
ಈ ಸಂಬAಧ ಮೊದಲ ಹಂತವಾಗಿ 2026ನೇ ನವೆಂಬರ್ 01ರಿಂದ ಜಾರಿಗೆ ಬರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ವೈದ್ಯರಿಗೆ ಈ ರಾತ್ರಿ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿದಿನ ರಾತ್ರಿ 9ಗಂಟೆಯ ನಂತರ ವೈದ್ಯರು ತಮ್ಮ ಕೇಂದ್ರಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ವ್ಯಾಪ್ತಿಯೊಳಗಿದ್ದುಕೊಂಡೇ ‘ಕರ್ತವ್ಯ’ ಅಪ್ಲಿಕೇಶನ್ ಮೂಲಕ ಹಾಜರಾತಿಯನ್ನು ನಮೂದಿಸಬೇಕು ಎಂದು ಸೂಚಿಸಲಾಗಿದೆ. ಹಂತ ಹಂತವಾಗಿ ಇದನ್ನು ಎಲ್ಲಾ ಇಲಾಖೆಗೂ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.
ಮಂಜೂರಾದ ರಜೆಯಲ್ಲಿರುವ ಅಧಿಕಾರಿ-ಸಿಬ್ಬಂದಿಗೆ ಈ ಆದೇಶದಲ್ಲಿ ಕೊಂಚ ವಿನಾಯಿತಿ ಇದೆ. ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕೇಂದ್ರಸ್ಥಾನದಿAದ ಹೊರಗೆ ಅಧಿಕೃತ ಕರ್ತವ್ಯದಲ್ಲಿರುವ ನೌಕರರು ಹಾಗೂ ಕೇಂದ್ರಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರುವ ನೌಕರರಿಗೆ ಸಹ ವಿನಾಯತಿ ನೀಡಲಾಗಿದೆ. ಆದರೆ, ಅನುಮತಿ ಬಗ್ಗೆ ಕಾರಣ ದಾಖಲಿಸುವುದು ಕಡ್ಡಾಯವಾಗಿದೆ. ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನದಲ್ಲಿ ವಾಸವಿರದ ಅಧಿಕಾರಿಗಳ ವಿರುದ್ಧ ನಾಗರಿಕ ಸೇವಾ ನಿಯಮಗಳಡಿ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಲಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳು, ಕಚೇರಿಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಇನ್ಮುಂದೆ `ಕರ್ತವ್ಯ’ ಅಪ್ಲಿಕೇಶನ್ ಮೂಲಕ ದಾಖಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇಲ್ಲಿಯವರೆಗೆ ಖಾಯಂ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಈ ಹಾಜರಾತಿಯನ್ನು ಇದೀಗ ಗುತ್ತಿಗೆ ನೌಕರರಿಗೂ ಕಡ್ಡಾಯ ಮಾಡಿ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಸರ್ಕಾರದ ಅಧೀನದಲ್ಲಿರುವ ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು 2026ರ ನವೆಂಬರ್ 25ರೊಳಗಾಗಿ ‘ಕರ್ತವ್ಯ’ ಆಪ್ನಲ್ಲಿ ನೋಂದಾಯಿಸಿಕೊಳ್ಳಲು ಆಯಾ ಇಲಾಖಾ ಮುಖ್ಯಸ್ಥರಿಗೆ ಮತ್ತು ಕಚೇರಿಗಳಿಗೆ ಸೂಚಿಸಲಾಗಿದೆ. 2026ರ ಡಿಸೆಂಬರ್ 1ರಿಂದ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ಹಾಜರಾತಿಯನ್ನು ಕೇವಲ ‘ಕರ್ತವ್ಯ’ ಆಪ್ನಲ್ಲಿ ಮಾತ್ರವೇ ದಾಖಲಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲಿ ಹಾಜರಾತಿ ಹಾಕಿದವರಿಗೆ ಮಾತ್ರ ವೇತನ ಸಿಗಲಿದೆ.
ಈಚೆಗೆ ಉಪಲೋಕಾಯುಕ್ತರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ವಿಚಾರಣೆ ವೇಳೆ ಹಲವು ನೌಕರರು ತಮ್ಮ ನಿಯೋಜಿತ ಕೇಂದ್ರಸ್ಥಾನದಲ್ಲಿ ವಾಸವಿರದೆ ದೂರದ ಊರುಗಳಿಂದ ಆಡಳಿತ ನಡೆಸುತ್ತಿರುವುದು ಗಮನಕ್ಕೆ ಬಂದಿತ್ತು. ಇದರಿಂದ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವುದನ್ನು ಅವರು ಗಮನಿಸಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸೇವಾ ನಿಯಮಗಳ ಪಾಲನೆಗಾಗಿ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಪ್ರಜಾ ಸೇವಾ ಇಲಾಖೆಯು ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.