ಹಳಿಯಾಳದ ಡಾ ಬಂಡು ಡಗ್ರಜೆ ಅವರು ತಮ್ಮ ಬೈಕಿನಲ್ಲಿ 1 ಲಕ್ಷ ರೂ ದುಡ್ಡು ಇರಿಸಿಕೊಂಡು ಓಡಾಡುತ್ತಿದ್ದು, ಇದನ್ನು ಅರಿತ ಕಳ್ಳರು ಆ ದುಡ್ಡಿನ ಚೀಲವನ್ನು ಲಪಟಾಯಿಸಿದ್ದಾರೆ. ಬೈಕಿನಲ್ಲಿದ್ದ ದುಡ್ಡು ಕಾಣದೇ ಡಾ ಬಂಡು ಡಗ್ರಜೆ ಅವರು ಕಂಗಾಲಾಗಿದ್ದಾರೆ.
ಹಳಿಯಾಳ – ಧಾರವಾಡ ರಸ್ತೆಯ ಜಡ್ಜ ಕ್ವಾಟರ್ಸಿನಲ್ಲಿ ಡಾ ಬಂಡು ರಾಮು ಡಗ್ರಜೆ ಅವರು ವಾಸವಾಗಿದ್ದಾರೆ. 58 ವರ್ಷದ ಅವರು ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೈಕಿನಲ್ಲಿ ಒಂದು ಬಟ್ಟೆ ಚೀಲ ಸಿಕ್ಕಿಸಿ ಓಡಾಡುವ ಅವರು ಆ ಚೀಲದಲ್ಲಿಯೇ ಅಗತ್ಯ ವಸ್ತುಗಳನ್ನಿಡುತ್ತಾರೆ. ಮೊನ್ನೆಯೂ ಬ್ಯಾಂಕ್ ಕೆಲಸದ ಓಡಾಟದಲ್ಲಿದ್ದ ಅವರು ಆ ಚೀಲದಲ್ಲಿ ಪಾಸ್ ಬುಕ್ & ಚೆಕ್ ಬುಕ್ ಒಯ್ದಿದ್ದಾರೆ. ಜೊತೆಗೆ 1 ಲಕ್ಷ ರೂಪಾಯಿಯ ಕಂತೆ ಕಂತೆ ನೋಟುಗಳನ್ನು ಅದೇ ಬ್ಯಾಗಿನಲ್ಲಿರಿಸಿಕೊಂಡಿದ್ದಾರೆ.
ಅದಾದ ನಂತರ ಆ ದುಡ್ಡಿನ ಚೀಲವಿದ್ದ ಬೈಕನ್ನು ಏರಿ ಅವರು ಸಂಚಾರ ಮಾಡಿದ್ದಾರೆ. ಅಕ್ಟೊಬರ್ 19ರ ಮಧ್ಯಾಹ್ನ 3.25ರ ಸುಮಾರಿಗೆ ಬೈಕಿಗೆ ಚೀಲ ಸಿಕ್ಕಿಸಿಕೊಂಡಿರುವುದನ್ನು ಅವರು ಗಮನಿಸಿದ್ದಾರೆ. 3.40ಕ್ಕೆ ನೋಡಿದಾಗ ಬೈಕಿಗೆ ಸಿಕ್ಕಿಸಿಕೊಂಡಿದ್ದ ಚೀಲ ಮಾಯವಾಗಿದೆ. 15 ನಿಮಿಷದ ಅವಧಿಯಲ್ಲಿ ಬೈಕಿನಲ್ಲಿದ್ದ ಚೀಲ ಹಾಗೂ ಅದರೊಳಗಿದ್ದ 1 ಲಕ್ಷ ರೂ ಹಣವೂ ಕಾಣೆಯಾಗಿದ್ದು, ಡಾ ಬಂಡು ಡಗ್ರಜೆ ಅವರು ಆ ಚೀಲವನ್ನು ಎಲ್ಲಡೆ ಹುಡುಕಿದ್ದಾರೆ. ಆದರೆ, ಅದು ಸಿಕ್ಕಿಲ್ಲ.
ಬಟ್ಟೆಯ ಚೀಲ, ಅದರೊಳಗಿದ್ದ ಚೆಕ್ ಬುಕ್-ಪಾಸ್ ಬುಕ್ ಜೊತೆ 1 ಲಕ್ಷ ರೂ ಹಣವನ್ನು ಕದ್ದವರ ವಿರುದ್ಧ ಡಾ ಬಂಡು ಡಗ್ರಜೆ ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಆ ಚೀಲ ಹಾಗೂ ಹಣ ಹುಡುಕಿಕೊಡುವ ಭರವಸೆ ನೀಡಿದ್ದು, ಕಳ್ಳನ ಶೋಧ ನಡೆಸಿದ್ದಾರೆ.