1 ಸಾವಿರ ರೂಪಾಯಿಯೂ ಖರ್ಚಿಲ್ಲದ ಫೈಬರ್ ನಿರ್ಮಿತ ಡಾ ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿ ಸರ್ಕಾರಿ ಕಚೇರಿಯವರು 10 ಸಾವಿರ ರೂ ನೀಡಿ ಖರೀದಿಸಬೇಕು ಎಂಬ ನಿಟ್ಟಿನಲ್ಲಿ ಕೆಲ ಅಧಿಕಾರಿಗಳಿಗೆ ಸೂಚನೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ 200ಕ್ಕೂ ಅಧಿಕ ಸರ್ಕಾರಿ ಕಚೇರಿಗಳಿದ್ದು, ಆ ಎಲ್ಲಾ ಕಚೇರಿಗೂ ಸಂಸ್ಥೆಯೊoದರ ಮುಖ್ಯಸ್ಥರು ಓಡಾಟ ನಡೆಸಿ ಮೂರ್ತಿ ಮಾರಾಟ ಮಾಡುವ ದಂಧೆ ಶುರು ಮಾಡಿದ್ದಾರೆ!
ಸದ್ಯ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವಿದೆ. ನಿತ್ಯ ಆ ಭಾವಚಿತ್ರಕ್ಕೆ ಅಧಿಕಾರಿ-ಸಿಬ್ಬಂದಿ ನಮಿಸಿ ತಮ್ಮ ಕಾರ್ಯ ಶುರು ಮಾಡುತ್ತಾರೆ. ಹೀಗಿರುವಾಗ, ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿ ಕಚೇರಿಯಲ್ಲಿರಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಯೊoದು ಸರ್ಕಾರಕ್ಕೆ ಪತ್ರ ಬರೆದಿದೆ. `ಈ ಕುರಿತು ಕ್ರಮ ಜರುಗಿಸಿ’ ಎಂಬ ನಿಟ್ಟಿನಲ್ಲಿ ಬಂದ ಹಿಂಬರಹದ ಆಧಾರದಲ್ಲಿ ಸರ್ಕಾರದ ಇಲಾಖೆಯಿಂದಲೇ ಸುತ್ತೋಲೆ ಹೊರಡಿಸಿ, ತಮ್ಮದೇ ಸಂಸ್ಥೆಯಿoದ ಅಂಬೇಡ್ಕರ್ ಮೂರ್ತಿ ಮಾರಾಟ ನಡೆಸುತ್ತಿದೆ. ಅಂಬೇಡ್ಕರ್ ಅವರ ಆದರ್ಶ ತಿಳಿಸುವ ನೆಪದಲ್ಲಿ ಸರ್ಕಾರೇತರ ಸಂಸ್ಥೆಯೊoದು ಖಜಾನೆ ಮೇಲೆ ಕಣ್ಣಿಟ್ಟಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಅಂಬೇಡ್ಕರ್ ಅವರ ಮೂರ್ತಿಯಿಡಬೇಕು ಎಂದು ಅದೇ ಸಂಸ್ಥೆ ಪತ್ರ ಬರೆದು, ಆ ಸಂಸ್ಥೆಯೇ ಕೋಟ್ಯಂತರ ರೂ ಅನುದಾನವನ್ನು ತನ್ನದಾಗಿಸಿಕೊಳ್ಳುತ್ತಿದೆ.
ಬೆಳಗಾವಿಯ ಸವದತ್ತಿಯ ಸ್ಫೂರ್ತಿ ಮಲ್ಟಿಪರ್ಪಸ್ ಸೋಶಿಯಲ್ ವೆಲ್ವೇರ್ ಗ್ರೂಪ್ ಕೋರಿಕೆ ಮೇಲೆ ಸೂಕ್ತ ಕ್ರಮ ವಹಿಸಲು ಸರಕಾರಿ ಸುತ್ತೋಲೆ ಹೊರಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಪತ್ರದ ಉಲ್ಲೇಖದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರು ಅಧೀನ ಕಚೇರಿಗಳಿಗೆ ಈ ಸುತ್ತೋಲೆ ಹೊರಡಿಸಿದ್ದಾರೆ. ಇದೇ ರೀತಿ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯಲ್ಲಿಯೂ ಈ ಸಂಸ್ಥೆಯಿoದ ಮೂರ್ತಿ ವಿತರಿಸಲಾಗಿದೆ. ಅದರಂತೆ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ವಿವಿಧ ಇಲಾಖೆಗೆ ತೆರಳುವ ಸಂಸ್ಥೆ ಪ್ರಮುಖರು ಮೂರ್ತಿ ಮಾರಾಟ ಮಾಡುತ್ತಿದ್ದಾರೆ.
ಸರಕಾರಿ ಕಚೇರಿಯ ಅಧಿಕಾರಿ ಟೇಬಲ್ ಮೇಲಿರಿಸುವ ಈ ಮೂರ್ತಿ 21 ಇಂಜು ಎತ್ತರವಿದೆ. ಅಂಥ ಮೂರ್ತಿ ನಿರ್ಮಾಣಕ್ಕೆ 1 ಸಾವಿರ ರೂ ವೆಚ್ಚಾಗುತ್ತಿದೆ. ಆದರೆ, ಆ ಸಂಸ್ಥೆ ಅದೇ ಮೂರ್ತಿಯನ್ನು 9998ರೂಪಾಯಿಗೆ ಮಾರಾಟ ಮಾಡುತ್ತಿದೆ. ಈ ಮೂರ್ತಿಯನ್ನು ಶಾಲೆ, ಕಾಲೇಜು, ಹಾಸ್ಟೆಲ್, ಸ್ಥಳೀಯ ಸರಕಾರಿ ಕಚೇರಿಗೆ ವಿತರಿಸಲು ಸಂಸ್ಥೆ ಅವಕಾಶ ಕೋರಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳಿಂದಲೂ ಕ್ರಮ ಜರುಗಿಸಿ ಎಂಬ ಪತ್ರ ರವಾನೆಯಾಗಿದೆ. ಕೋಟ್ಯಂತರ ರೂ ಮೌಲ್ಯದ ಹಣಕಾಸಿನ ವ್ಯವಹಾರವನ್ನು ಸಂಸ್ಥೆ ಯಾವುದೇ ಟೆಂಡರ್ ಇಲ್ಲದೇ ಮಾಡಿ ಮುಗಿಸುವ ಪ್ರಯತ್ನ ಮಾಡಿದೆ. ವಿಜಯ ಕರ್ನಾಟಕದ ಪ್ರಮೋದ ಹರಿಕಂತ್ರ ಅವರು ಈ ವಿಷಯವನ್ನು ದಾಖಲೆ ಜೊತೆ ಮಾಧ್ಯಮದ ಮೂಲಕ ಬಯಲಿಗೆಳೆದಿದ್ದಾರೆ.