ದಾಂಡೇಲಿಯ ಅಭಿಷೇಕ್ ಮಾಜಾಳಿಕರ್ ಹಾಗೂ ಸೋನಾಲಿ ಮಾಜಾಳಿಕರ್ ಅವರು ಕಾರವಾರದ ಪವನಕುಮಾರ ಗೋಸ್ವಾಮಿ ಅವರಿಗೆ ಸಾಲ ನೀಡಿದ್ದು, ಆ ಸಾಲ ಮರುಪಾವತಿಸದ ಕಾರಣ ಅವರ ತಾಯಿ ಕಲ್ಪನಾ ಗೋಸ್ವಾಮಿ ಅವರಿಗೆ ಹೊಡೆದಿದ್ದಾರೆ. ಸಾಕಷ್ಟು ನೋವು ಅನುಭವಿಸಿದ ಕಲ್ಪನಾ ಗೋಸ್ವಾಮಿ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದಿದ್ದಾರೆ.
ಕಾರವಾರದ ನಂದನಗದ್ದಾ ಗೋಸಾವಿವಾಡದ ಪವನಕುಮಾರ ಗೋವಿಂದ ಗೋಸ್ವಾಮಿ ಅವರು ವಾಸವಾಗಿದ್ದಾರೆ. 36 ವರ್ಷದ ಅವರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕೆಲ ವರ್ಷದ ಹಿಂದೆ ಅವರು ಸೆಂಟ್ ಜೋಸೆಪ್ ಸೊಸೈಟಿಯಲ್ಲಿ 70 ಸಾವಿರ ರೂ ಸಾಲ ಮಾಡಿದ್ದು, ಅದನ್ನು ತೀರಿಸಿರಲಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಅವರಿಗೆ ಪದೇ ಪದೇ ಫೋನ್ ಮಾಡಿ ಸಾಲ ತೀರಿಸಲು ಸೂಚಿಸಿದ್ದಾರೆ. ಬ್ಯಾಂಕಿನವರ ಕಾಟಕ್ಕೆ ಬೇಸತ್ತ ಪವನಕುಮಾರ ಅವರು ದಾಂಡೇಲಿಯ ಅಭಿಷೇಕ ಮಾಜಾಳಿಕರ್ ಹಾಗೂ ಸೋನಾಲಿ ಮಾಜಾಳಿಕರ್ ಅವರನ್ನು ಸಂಪರ್ಕಿಸಿದ್ದಾರೆ. ಅವರಿಬ್ಬರ ಸಹಾಯಪಡೆದು 2025ರ ಡಿಸೆಂಬರ್ ಅವಧಿಯಲ್ಲಿ ಸೆಂಟ್ ಜೋಸೆಪ್ ಬ್ಯಾಂಕಿನ ಸಾಲ ಚುಕ್ತಾ ಮಾಡಿದ್ದಾರೆ.
ದಾಂಡೇಲಿಯ ಅಭಿಷೇಕ ಮಾಜಾಳಿಕರ್ ಹಾಗೂ ಸೋನಾಲಿ ಮಾಜಾಳಿಕರ್ ಅವರಿಗೆ `ಬೇರೆ ಕಡೆ ಸಾಲ ಮಾಡಿ, ನಿಮ್ಮ ಸಾಲ ತೀರಿಸುವೆ’ ಎಂಬ ಭರವಸೆ ನೀಡಿದ್ದಾರೆ. ಆದರೆ, 10 ತಿಂಗಳು ಕಳೆದರೂ ಪವನಕುಮಾರ ಅವರು ಅಭಿಷೇಕ್ ಮಾಜಾಳಿಕರ್ ಹಾಗೂ ಸೋನಾಲಿ ಮಾಜಾಳಿಕರ್ ಅವರ ಸಾಲ ಮರಳಿಸಿಲ್ಲ. ಇದರಿಂದ ಸಿಟ್ಟಾದ ಅವರಿಬ್ಬರು ಡಿಸೆಂಬರ್ 12ರಂದು ಪವನಕುಮಾರ ಅವರ ಮನೆ ಬಳಿ ಬಂದಿದ್ದಾರೆ. ಈ ವೇಳೆ ಪವನಕುಮಾರ ಅವರು ಅಲ್ಲಿರದ ಕಾರಣ ಅವರ ತಾಯಿ ಕಲ್ಪನಾ ಗೋಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಕಲ್ಪನಾ ಗೋಸ್ವಾಮಿ ಅವರನ್ನು ಹಿಡಿದು ಥಳಿಸಿದ್ದಾರೆ. ಅತ್ಯಂತ ಕೆಟ್ಟ ಶಬ್ದಗಳಿಂದ ನಿಂದಿಸಿ ಅವರ ಕೂದಲು ಹಿಡಿದು ಎಳೆದಾಡಿದ್ದಾರೆ.
ಇದನ್ನು ನೋಡಿದ ಪಕ್ಕದಮನೆಯವರು ಪವನಕುಮಾರ ಅವರಿಗೆ ಫೋನ್ ಮಾಡಿದ್ದಾರೆ. ಪವನಕುಮಾರ ಅವರು ಅಲ್ಲಿಗೆ ಬರುವುದರೊಳಗೆ ಅಭಿಷೇಕ್ ಮಾಜಾಳಿಕರ್ ಹಾಗೂ ಸೋನಾಲಿ ಮಾಜಾಳಿಕರ್ ಅವರು ಪರಾರಿಯಾಗಿದ್ದು, ಅಸ್ವಸ್ಥಗೊಂಡ ಕಲ್ಪನಾ ಗೋಸ್ವಾಮಿ ಅವರನ್ನು ಪವನಕುಮಾರ ಅವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾಲ ತೀರಿಸದ ಕಾರಣ ಆಕ್ರಮಣ ನಡೆಸಿದವರ ವಿರುದ್ಧ ಪವನಕುಮಾರ ಅವರು ಕೋರ್ಟಿಗೆ ದೂರಿದ್ದು, ಕೋರ್ಟ ಸೂಚನೆ ಮೇರೆಗೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
`ಅಧಿಕೃತ ಬ್ಯಾಂಕುಗಳಲ್ಲಿಯೇ ಸಾಲ ಸ್ವೀಕರಿಸಿ. ಮೀಟರ್ ಬಡ್ಡಿ ದಂಧೆ ವಿರೋಧಿಸಿ’