ಕಾರವಾರದ ಹೊಸಾಳಿ ಗ್ರಾಮದ ದುಮ್ಮನಶಿಟ್ಟಾದಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಗಂಡನ ಮನೆಯವರ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದುಮ್ಮನಶಿಟ್ಟಾದ ನಿಕ್ಷೀತಾ ಅಲಿಯಾಸ್ ಅಕ್ಷತಾ ನಾಯ್ಕ (34) ಸಾವನಪ್ಪಿದವರು. ನಿಕ್ಷೀತಾ ಅವರ ತಾಯಿ ಮಂಗಲಾ ಮೂಡಂಗಿ ನೀಡಿದ ದೂರಿನ ಆಧಾರದ ಮೇಲೆ ಪತಿ ನಿತೇಶ ನಾಯ್ಕ, ಅತ್ತೆ ರಾಧಾ ಹಾಗೂ ಪತಿಯ ಸಹೋದರ ಸತೀಶ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಕ್ಷೀತಾ ಅವರು ನಿತೇಶ ನಾಯ್ಕ ಎನ್ನುವವನ್ನು ಮದುವೆ ಆಗಿದ್ದರು. ದಂಪತಿಗೆ 2 ವರ್ಷ 8 ತಿಂಗಳ ಗಂಡು ಮಗುವಿದೆ. ಮದುವೆಯಾದ ಬಳಿಕ ಕಳೆದ ಒಂದು ವರ್ಷದಿಂದ ಪತಿ ಹಾಗೂ ಅವರ ಮನೆಯವರು ಮಗಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಮಂಗಲಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಇತ್ತೀಚೆಗೆ ಚಿಕ್ಕ ಪುಟ್ಟ ವಿಷಯಕ್ಕೆ ಮನೆಯವರೊಂದಿಗೆ ಜಗಳವಾಗಿತ್ತು ಎನ್ನಲಾಗಿದೆ. ಈ ಘಟನೆಯ ಬಳಿಕ ನಿಕ್ಷೀತಾ ಅವರು ತಾಯಿಗೆ ದೂರವಾಣಿ ಕರೆ ಮಾಡಿ, ಗಂಡನ ಮನೆಯಲ್ಲಿ ಇರಲು ಇಷ್ಟವಿಲ್ಲವೆಂದು ತಿಳಿಸಿದ್ದಲ್ಲದೆ, ತಮ್ಮನ್ನು ಅಲ್ಲಿಂದ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಗಳ ಮನವಿಯ ಹಿನ್ನೆಲೆಯಲ್ಲಿ ಅ.12ರಂದು ಬೆಳಗ್ಗೆ ಮಂಗಲಾ ಅವರು ದುಮ್ಮನಶಿಟ್ಟಾದಲ್ಲಿರುವ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಮನೆಯ ಮೇಲ್ಮಹಡಿಯ ಮಲಗುವ ಕೋಣೆಯಲ್ಲಿ ನಿಕ್ಷೀತಾ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಗಳ ಸಾವಿಗೆ ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿರುವ ತಾಯಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.