ಯಲ್ಲಾಪುರ-ಶಿರಸಿ ಮಾರ್ಗದ ತೂಕದಬೈಲ್ ಬಳಿ ಬೈಕ್ ಅಪಘಾತವಾಗಿದ್ದು, ಇದನ್ನು ನೋಡಿದ ಶಿರಸಿ ಮಹಾಲಕ್ಷ್ಮೀ ಆಸ್ಪತ್ರೆಯ ವೈದ್ಯ ದಿನೇಶ ಹೆಗಡೆ ಅವರು ಅಲ್ಲಿಯೇ ತುರ್ತು ಚಿಕಿತ್ಸೆ ನೀಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಮಾರುತಿ ಕಲಘಟಗಿ ಅವರಿಗೆ ಆರೈಕೆ ಮಾಡಿ, ಅವರ ಜೀವ ಕಾಪಾಡಿದ್ದಾರೆ.
ಮಂಗಳವಾರ ಮಾರುತಿ ಕಲಘಟಗಿ ಅವರು ಯಲ್ಲಾಪುರ-ಶಿರಸಿ ಮಾರ್ಗವಾಗಿ ಸಂಚರಿಸುತ್ತಿದ್ದರು. ಯಲ್ಲಾಪುರದಿಂದ ಹೊರಟ ಅವರು ಮಂಚಿಕೇರಿ ಬಳಿಯ ತೂಕದಬೈಲ್ ಬಳಿ ಬೈಕಿನಿಂದ ಬಿದ್ದರು. ಮಾರುತಿ ಕಲಘಟಕಿ ಅವರ ತಲೆ, ಕೈ ಹಾಗೂ ಮೈಗೆ ಪೆಟ್ಟಾಗಿದ್ದವು. ನೋವಿನಿಂದ ಅವರು ನರಳುತ್ತಿದ್ದರು.
ಬೈಕ್ ಸ್ಕಿಡ್ ಆಗಿದನ್ನು ನೋಡಿದ ಯಲ್ಲಾಪುರ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸತೀಶ ನಾಯ್ಕ ಅವರು 108ಗೆ ಪೋನ್ ಮಾಡಿದರು. ಆದರ, ಅಲ್ಲಿ ಅವರಿಗೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಒಂದು ಕಡೆ ‘ಆಂಬುಲೆನ್ಸಿಗೆ ಡ್ರೈವರ್ ಇಲ್ಲ’ ಎಂಬ ಉತ್ತರ ಬಂದಿತು. ಇನ್ನೊಂದು ಕಡೆ ‘ಆಂಬುಲೆನ್ಸ ರಿಪೇರಿಗೆ ಹೋಗಿದೆ’ ಎಂದು ಗೊತ್ತಾಯಿತು.
ಈ ವೇಳೆ ಶಿರಸಿ ಮಹಾಲಕ್ಷ್ಮೀ ಆಸ್ಪತ್ರೆಯ ಮಕ್ಕಳ ತಜ್ಞ ದಿನೇಶ ಹೆಗಡೆ ಅವರು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಅಪಘಾತ ನೋಡಿದ ಅವರು ತಕ್ಷಣ ತಮ್ಮ ಕಾರು ನಿಲ್ಲಿಸಿದರು. ರಸ್ತೆಯ ಮೇಲೆ ಬಿದ್ದು ಓದ್ದಾಡುತ್ತಿದ್ದ ಮಾರುತಿ ಅವರಿಗೆ ಅಲ್ಲಿಯೇ ಚಿಕಿತ್ಸೆ ಶುರು ಮಾಡಿದರು.
ಗಾಯಗೊಂಡಿದ್ದ ಮಾರುತಿ ಅವರಿಗೆ ದಿನೇಶ ಹೆಗಡೆ ಅವರು ಸಲಾಯನ್ ಎರಿಸಿ ಇಂಜೆಕ್ಷನ್ ನೀಡಿ ಚಿಕಿತ್ಸೆ ನೀಡಿ ಮಾನವಿಯತೆ ಮೇರೆದರು. ನಂತರ ಯಲ್ಲಾಪುರದಿಂದ ತಾಲೂಕಾ ಆಸ್ಪತ್ರೆಯಿಂದ ಬಂದ ಅಂಬುಲೆನ್ಸಿನಲ್ಲಿ ಮಾರುತಿ ಅವರನ್ನು ಹೆಚ್ವಿನ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಯಿತು.