ಶಿರಸಿ ಆರೆಗೊಪ್ಪ ತೋಟಗಾರಿಕಾ ನರ್ಸರಿ ಬಳಿ ಬಚಗಾಂವಿನ ಫೈಜಾನ್ ರಜಾಕ್ ಅವರು ನಿಲ್ಲಿಸಿದ್ದ ಬುಲೆರೋಗೆ ಕಬ್ಜೆಯ ವಿ ಎಂ ಹೆಗಡೆ ಅವರು ಬೈಕ್ ಗುದ್ದಿದ್ದಾರೆ. ಈ ಅಪಘಾತದ ರಭಸಕ್ಕೆ ವಿ ಎಂ ಹೆಗಡೆ ಅವರು ಸಾವನಪ್ಪಿದ್ದು, ಅವರ ಪುತ್ರಿ ಸ್ನೇಹಾ ಹೆಗಡೆ ಅವರಿಗೆ ಗಂಭೀರ ಗಾಯವಾಗಿದೆ.
ಶಿರಸಿಯ ಕಬ್ಜೆಯಲ್ಲಿ ವಿಶ್ವೇಶ್ವರ ಮೋಹನ ಹೆಗಡೆ (ವಿ ಎಂ ಹೆಗಡೆ) ಅವರು ವಾಸವಾಗಿದ್ದರು. 63 ವರ್ಷದ ಅವರು ಸಾಮಾಜಿಕ ಕಾರ್ಯದಲ್ಲಿ ಸಕ್ರೀಯರಾಗಿದ್ದರು. ವಿವಿಧ ಚಟುವಟಿಕೆಗಳನ್ನು ತಮ್ಮನ್ನು ತೊಡಗಿಸಿಕೊಂಡು ಆ ಭಾಗದ ಜನಪ್ರಿಯ ವ್ಯಕ್ತಿಯಾಗಿದ್ದರು. ಜನಪ್ರತಿನಿಧಿಯಾಗಿಯೂ ಅವರು ಕೆಲಸ ಮಾಡಿದ್ದರು. ಅಕ್ಟೊಬರ್ 3ರ ಸಂಜೆ ಅವರು ಬನವಾಸಿ-ಶಿರಸಿ ರಸ್ತೆ ಮಾರ್ಗವಾಗಿ ಬೈಕ್ ಓಡಿಸುತ್ತಿದ್ದರು. ಆ ಬೈಕಿನಲ್ಲಿ ಅವರ ಪುತ್ರಿ ಸ್ನೇಹಾ ಹೆಗಡೆ ಅವರು ಜೊತೆಯಿದ್ದರು.
ಶಿರಸಿ ಬಚಗಾಂವ್ ಕಾಳೆಹೊಂಡದ ಫೈಜಾನ್ ಅಬ್ದುಲ್ ರಜಾಕ್ ಅವರು ಇದೇ ಮಾರ್ಗದಲ್ಲಿ ಬುಲೆರೋ ಓಡಿಸಿಕೊಂಡು ಹೊರಟಿದ್ದರು. ಫೈಜಾನ್ ರಜಾಕ್ ಅವರು ತಮ್ಮ ಬುಲೆರೋವನ್ನು ಆರೆಗೊಪ್ಪ ತೋಟಗಾರಿಕಾ ನರ್ಸರಿ ಬಳಿ ನಿಲ್ಲಿಸಿದ್ದರು. ಇನ್ನಿತರ ವಾಹನ ಓಡಾಟಕ್ಕೆ ತೊಂದರೆ ಆಗುವ ರೀತಿಯಲ್ಲಿಯೇ ಅವರು ಬುಲೆರೋ ನಿಲ್ಲಿಸಿದ್ದರು. ಈ ವೇಳೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ವಿ ಎಂ ಹೆಗಡೆ ಅವರು ತಮ್ಮ ಬೈಕನ್ನು ಬುಲೆರೋಗೆ ಗುದ್ದಿದರು.
ಬುಲೆರೋ ಹಿಂದೆ ಬೈಕು ಗುದ್ದಿದ ಕಾರಣ ಬೈಕು ಜಖಂ ಆಯಿತು. ಬೈಕಿನಲಿದ್ದ ವಿ ಎಂ ಹೆಗಡೆ ಅವರ ಜೊತೆ ಅವರ ಪುತ್ರಿ ಸ್ನೇಹಾ ಹೆಗಡೆ ಅವರಿಗೂ ಗಂಭೀರವಾಗಿ ಗಾಯವಾಯಿತು. ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. ಆದರೆ, ವಿ ಎಂ ಹೆಗಡೆ ಅವರು ಆ ಅಪಘಾತದ ಆಘಾತದಿಂದ ಚೇತರಿಸಿಕೊಳ್ಳಲಿಲ್ಲ. ಅವರು ಅಲ್ಲಿಯೇ ಕೊನೆಯುಸಿರೆಳೆದರು. ಈ ಅಪಘಾತದ ಬಗ್ಗೆ ಶಿರಸಿ ಕಸ್ತೂರಿಬಾನಗರದಲ್ಲಿ ಪೆಂಟಿAಗ್ ಕೆಲಸ ಮಾಡುವ ಪೈಜ್ ನಾಸೀರ್ ಅಹ್ಮದ್ ಶೇಖ್ ಅವರು ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿದರು.