ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಿರುವ ರಸ್ತೆ ವ್ಯವಸ್ಥೆಯೇ ಸರಿಯಾಗಿಲ್ಲ. ಹೀಗಿರುವಾಗ, ಸರ್ಕಾರ ಇಲ್ಲಿಯೂ ಮಹಾನಗರಗಳಲ್ಲಿರುವಂತೆ `ರಿಂಗ್ ರೋಡ್’ ಮಾಡಲು ಆಸಕ್ತಿವಹಿಸಿದೆ. ಈಗಿರುವ ರಸ್ತೆಹೊರತುಪಡಿಸಿ ಪರ್ಯಾಯ ಜಾಗದಲ್ಲಿ ಮತ್ತೊಂದು ರಸ್ತೆ ಮಾಡಲು ನಕ್ಷೆ ಸಿದ್ಧವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಐದು ಕಡೆ ನಕ್ಷೆ ಸಿದ್ಧಪಡಿಸಿದ್ದು, ಆ ನಕ್ಷೆಯ ಪ್ರಕಾರ ಅನೇಕರ ಮನೆ-ಜಮೀನುಗಳ ಮೇಲೆ ರಸ್ತೆ ಹಾದುಹೋಗಲಿದೆ!
ಅಂಕೋಲಾ, ಮುಂಡಗೋಡು, ಯಲ್ಲಾಪುರ, ಜಾಲಿ ಹಾಗೂ ಮಂಕಿಯಲ್ಲಿ ರಿಂಗ್ ರೋಡ್ ನಿರ್ಮಿಸಲು ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ. ಈ ಭಾಗದಲ್ಲಿನ ಅನೇಕರ ಮನೆ-ಭೂಮಿಗಳ ಮೇಲೆಯೇ 30 ಅಡಿ ಅಗಲದ ರಸ್ತೆ ಹಾದು ಹೋಗುವ ನಿಟ್ಟಿನಲ್ಲಿ ನಕ್ಷೆ ರಚಿಸಲಾಗಿದೆ. ಸ್ಥಳ ವೀಕ್ಷಣೆ ಮಾಡದೇ ಅಧಿಕಾರಿಗಳು ಈ ನಕ್ಷೆ ತಯಾರಿಸಿದ್ದು, ವಿವಿಧ ಕಡೆ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ರಾಜ್ಯದ 108 ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗಾಗಿ ಸರ್ಕಾರ ಈ `ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್’ ರೂಪಿಸಿರುವುದಾಗಿ ಹೇಳಿಕೊಂಡಿದೆ. ಪ್ರತಿಯೊಂದು ಪಟ್ಟಣಕ್ಕೂ 100 ಅಡಿ ಅಗಲದ ವರ್ತುಲ ರಸ್ತೆ ಹಾಗೂ 2 ಕಿ.ಮೀ ಪ್ರಭಾವ ವಲಯವನ್ನು (ಇಂಪ್ಯಾಕ್ಟ್ ಝೋನ್) ನಿರ್ಮಿಸಲಾಗುತ್ತದೆ. ಇದು ಸಂಚಾರ ದಟ್ಟಣೆ ನಿಯಂತ್ರಿಸಿ, ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಹಾಗೂ ಮಹಾನಗರಗಳಿಗೆ ಆಗುವ ವಲಸೆ ತಡೆಯಲು ಸಹಕಾರಿಯಾಗಲಿದೆ ಎಂಬುದು ಸರ್ಕಾರದ ವಾದ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಿರುವ ರಸ್ತೆ ವ್ಯವಸ್ಥೆಯೇ ಸರಿಯಾಗಿಲ್ಲ. ಹೊಸದಾಗಿ ಭೂ ಸ್ವಾಧೀನ ಮಾಡಿ ಅಲ್ಲಿ ಹೊಸ ರಸ್ತೆ ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಉದ್ಬವಿಸಿದೆ. `ಈಗಿರುವ ರಸ್ತೆ ಗುಂಡಿ ಮುಚ್ಚಿ, ನಂತರ ಹೊಸ ಯೋಜನೆಗಳ ಬಗ್ಗೆ ವಿಚಾರ ಮಾಡಿ’ ಎಂದು ಸಹ ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಎಲ್ಲಡೆ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ತುಲ ರಸ್ತೆ ನಿರ್ಮಿಸುವ ಸಂಬoಧ ಜಿಐಎಸ್ ಆಧಾರಿತ `ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್’ಗೆ ಸಂಪುಟ ಅನುಮೋದನೆ ನೀಡಿತ್ತು. ರಾಜ್ಯಾದ್ಯಂತ 2 ಮತ್ತು 3ನೇ ಹಂತದ ನಗರಗಳಲ್ಲಿ ರಿಂಗ್ ರೋಡ್ ನಿರ್ಮಿಸುವ ಹಾಗೂ ಈ ರಸ್ತೆ ಸುತ್ತಮುತ್ತ ಮನೆ ಮತ್ತಿತರ ಕಟ್ಟಡ ಕಟ್ಟದಂತೆ ಇಂಪ್ಯಾಕ್ಟ್ ಜೋನ್ ನಿಗದಿಪಡಿಸಿ ಮರ ಬೆಳೆಸುವ ಚಿಂತನೆಯ ಯೋಜನೆ ಇದಾಗಿದೆ. ಅದಕ್ಕಾಗಿ ಸ್ಥಳೀಯ ಯೋಜನಾ ಪ್ರದೇಶಗಳಲ್ಲಿನ ಅನುಮೋದಿತ ಮಹಾಯೋಜನೆ ಹೊಂದಿರುವ ಹಾಗೂ ಮಹಾಯೋಜನೆ ಸಿದ್ಧಪಡಿಸುವ ಹಂತದಲ್ಲಿರುವ ನಗರ ಮತ್ತು ಪಟ್ಟಣಗಳಿಗೆ ಇದು ಅನ್ವಯವಾಗಲಿದೆ.
ಆಯ್ಕೆಯಾದ ಪ್ರತಿಯೊಂದು ಪಟ್ಟಣದ ಸುತ್ತಲೂ 30 ಮೀಟರ್ (100 ಅಡಿ) ಅಗಲದ ಸುಸಜ್ಜಿತ ವರ್ತುಲ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಇದು ನಗರದೊಳಗಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಹೊರವಲಯದ ಸಂಪರ್ಕವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಪ್ರಸ್ತಾಪಿತ ವರ್ತುಲ ರಸ್ತೆಯ ಎರಡೂ ಬದಿಗಳಲ್ಲಿ ತಲಾ 2 ಕಿಮೀ ವ್ಯಾಪ್ತಿಯ ಪ್ರದೇಶವನ್ನು ‘ಇಂಪ್ಯಾಕ್ಟ್ ಝೋನ್’ ಎಂದು ಗುರುತಿಸಲಾಗಿದ್ದು, ಈ ವಲಯದಲ್ಲಿ ಯೋಜನಾಬದ್ಧ ನಗರ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವ ಬಗ್ಗೆ ಯೋಜನೆಯಲ್ಲಿ ವಿವರಿಸಲಾಗಿದೆ.
ಆದರೆ, ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಈ ಯೋಜನೆ ಸೂಕ್ತವಲ್ಲ ಎಂಬ ಅಭಿಪ್ರಾಯವಿದೆ. ಈಗಾಗಲೇ ಇಲ್ಲಿನ ಜನ ಅನೇಕ ಯೋಜನೆಗಳಿಗೆ ಭೂಮಿ ತ್ಯಾಗ ಮಾಡಿದ್ದು, ಸದ್ಯ ಹೊಸ ರಸ್ತೆ ನಿರ್ಮಾಣಕ್ಕಾಗಿ ಮತ್ತೆ ಭೂಮಿ ಕೊಡಲು ಸಿದ್ಧರಿಲ್ಲ. ಜೊತೆಗೆ ಅನೇಕರು ಈ ಯೋಜನೆಯಿಂದ ಮನೆಯನ್ನು ಕಳೆದುಕೊಳ್ಳಲಿದ್ದು, ಅರಣ್ಯ ಪ್ರದೇಶಗಳು ಸಹ ಯೋಜನೆಯ ವ್ಯಾಪ್ತಿಗೆ ಬರಲಿದೆ. ಪಟ್ಟಣದ ಸಮೀಪದ ಕೆಲ ಊರುಗಳಲ್ಲಿ ಈ ರಸ್ತೆ ಹಾದು ಹೋಗಲಿರುವುದರಿಂದ ಅಲ್ಲಿನವರ ಆತಂಕ ಹೆಚ್ಚಾಗಿದೆ.