ಹೆಸ್ಕಾo ಸಿಬ್ಬಂದಿಯಾಗಿ ಕೆಲಸ ಮಾಡುವ ತಿಮ್ಮಯ್ಯ ನಾಯ್ಕ ಅವರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ದಂಡ ಪಾವತಿಸಲು ಹೋಗಿ 2.75 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಪರಿಚಿತ Apk ಫೈಲ್ ಡೌನ್ಲೋಡ್ ಮಾಡಿದ ಪರಿಣಾಮ ಅವರ ಮೂರು ಬ್ಯಾಂಕ್ ಖಾತೆಯ ಹಣ ಖಾಲಿಯಾಗಿದೆ.
ಯಲ್ಲಾಪುರದ ಹೆಸ್ಕಾಂ’ನಲ್ಲಿ ತಿಮ್ಮಯ್ಯ ಮಂಜುನಾಥ ನಾಯ್ಕ ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಕೊಂಡಿದ್ದಾರೆ. ಅವರು ಕರ್ಣಾಟಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ತಮ್ಮ ಉಳಿತಾಯದ ಹಣವನ್ನು ಅವರು ಆ ಬ್ಯಾಂಕ್ ಖಾತೆಯಲ್ಲಿರಿಸಿದ್ದು, ಅದಕ್ಕೆ ಇದೀಗ ಕನ್ನ ಬಿದ್ದಿದೆ.
ಅಕ್ಟೊಬರ್ 23ರಂದು ತಿಮ್ಮಯ್ಯ ನಾಯ್ಕ ಅವರಿಗೆ ಒಂದು ಮೆಸೆಜ್ ಬಂದಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಬಗ್ಗೆ ಅದರಲ್ಲಿ ಬರೆಯಲಾಗಿದ್ದು, ದಂಡ ಪಾವತಿಗೆ ಸೂಚಿಸಲಾಗಿದೆ. ಅದರಂತೆ ತಿಮ್ಮಯ್ಯ ನಾಯ್ಕ ಅವರು ಅಲ್ಲಿದ್ದ ಲಿಂಕ್ ಬಳಸಿ ಅಪರಿಚಿತ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ್ದಾರೆ. ಎಂ ಪರಿವಾಹನ್ ಎಂಬ ಹೆಸರಿನ ಎಪಿಕೆ ಫೈಲ್ ಅವರ ಮೊಬೈಲಿನಲ್ಲಿ ಡೌನ್ಲೋಡ್ ಆಗಿದೆ. ಅದನ್ನು ತೆರೆದಾಗ ಅಲ್ಲಿ ಮೊಬೈಲ್ ಸಂಖ್ಯೆ ಹಾಗೂ ವಾಹನ ಸಂಖ್ಯೆ ನಮೂದಿಸುವ ಸೂಚನೆ ಬಂದಿದೆ. ಅದನ್ನು ಅವರು ಪಾಲಿಸಿದ್ದಾರೆ.
ಅದಾದ ನಂತರ 1 ರೂ ಪಾವತಿಗೆ ಸೂಚನೆ ಬಂದಿದ್ದು, ಮೂರು ಬಾರಿ ಪ್ರಯತ್ನಿಸಿದರೂ 1 ರೂ ಪಾವತಿ ಆಗಿಲ್ಲ. ಆದರೆ, ಅಕ್ಟೊಬರ್ 24ರಂದು ಅವರ ಮೂರು ಬ್ಯಾಂಕ್ ಖಾತೆಯಿಂದ ಒಟ್ಟು 2.75 ಲಕ್ಷ ರೂ ಮಾಯವಾಗಿದೆ. ನಕಲಿ ಫೈಲ್ ಮೂಲಕ ವಂಚಕರು ತಿಮ್ಮಯ್ಯ ನಾಯ್ಕ ಅವರ ಹಣ ಎಗರಿಸಿದ್ದಾರೆ.