ಶಿರಸಿ, ಸಿದ್ದಾಪುರ, ಹೊನ್ನಾವರ, ಅಂಕೋಲಾ ಹಾಗೂ ಜೊಯಿಡಾದ 3317 ಜನರನ್ನು ಈ ವರ್ಷ ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಿದ್ದು, ಅದರಲ್ಲಿ 12 ಜನರಿಗೆ ಮಂಗನ ಕಾಯಿಲೆಯಿರುವುದು ಗೊತ್ತಾಗಿದೆ. ಅದರಲ್ಲಿ ಒಬ್ಬರು ರೋಗ ವಾಸಿಯಾಗದೇ ಸಾವನಪ್ಪಿದ್ದಾರೆ. ಈ ಅವಧಿಯಲ್ಲಿ ಮಂಗನ ಖಾಯಿಲೆಗೆ ಒಳಗಾಗಿ 53 ಮಂಗಗಳು ಸಹ ಸಾವನಪ್ಪಿದೆ!
ಮಂಗನ ಕಾಯಿಲೆ ಕುರಿತು ಆರೋಗ್ಯ ಇಲಾಖೆ ಹೆಚ್ಚಿನ ಮುತುವರ್ಜಿವಹಿಸಿದ್ದು, ಅದರ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿದೆ. ಅನುಮಾನಾಸ್ಪದ ವ್ಯಕ್ತಿ, ಸಾವನಪ್ಪಿದ ಮಂಗ ಹಾಗೂ ಉಣ್ಣೆಗಳನ್ನು ಸಹ ಸರ್ಕಾರ ಅಧ್ಯಯನಕ್ಕೆ ಒಳಪಡಿಸುತ್ತಿದೆ. ಈ ವರ್ಷ ಮಂಗನ ಕಾಯಿಲೆ ಪರೀಕ್ಷೆಗಾಗಿ 3317 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 12 ಜನರಿಗೆ ಪಾಸಿಟಿವ್ ಬಂದಿದೆ. ಒಬ್ಬರು ರೋಗದಿಂದ ಸಾವನಪ್ಪಿದ್ದಾರೆ. ಇದೇ ಅವಧಿಯಲ್ಲಿ 53 ಮಂಗ ಸಾವನಪ್ಪಿರುವ ಲೆಕ್ಕ ಸಿಕ್ಕಿದ್ದು, ಅದರಲ್ಲಿ 10 ಮಂಗಗಳ ಶವ ಪರೀಕ್ಷೆಯನ್ನು ಸಹ ನಡೆಸಲಾಗಿದೆ. ಆದರೆ, ಆ ಮಂಗಗಳಲ್ಲಿ ಮಂಗನ ಕಾಯಿಲೆಯ ಲಕ್ಷಣ ಕಾಣಿಸಿಲ್ಲ.
ಮಂಗನ ಮೈಮೇಲಿದ್ದ 716 ಉಣ್ಣೆಗಳನ್ನು ಸಹ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಅದನ್ನು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿಯೂ ಪಾಸಿಟಿವ್ ಅಂಶ ಕಾಣಿಸಿಲ್ಲ. ಈ ವಿಷಯದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸಂಜಯ ದೊಡ್ಡಮನಿ ಅವರು ಜಿಲ್ಲಾಧಿಕಾರಿ ಹರ್ಷಲ್ ಬೊಯರ್ ಅವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ `ಪ್ರತೀ ವರ್ಷ ಜಿಲ್ಲೆಯ ಸಿದ್ದಾಪುರ, ಶಿರಸಿ, ಹೊನ್ನಾವರ, ಅಂಕೋಲಾ ಮತ್ತು ಜೋಯಿಡಾ ತಾಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಕಂಡುಬರುತ್ತಿದ್ದು, ಈ ಭಾಗದ ಸಾರ್ವಜನಿಕರಿಗೆ ಕಾಯಿಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ವ್ಯಾಪಕವಾಗಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಡೀಸಿ ಸೂಚನೆ ನೀಡಿದ್ದಾರೆ.
`ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಮಂಗಗಳು ಸತ್ತಿರುವುದು ಕಂಡುಬAದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡÀಬೇಕು. ಕಾಡು ಮತ್ತು ತೋಟಕ್ಕೆ ತೆರಳುವಾಗ ಡೇಪಾ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ದನಕರುಗಳ ಮೈಯಿಂದ ಉಣ್ಣೆಗಳನ್ನು ತೆಗೆಯಬೇಕು ಮತ್ತು ಅವುಗಳಿಗೆ ಉಣ್ಣೆ ನಿವಾರಕ ತೈಲವನ್ನು ಲೇಪಿಸಬೇಕು. ಜ್ವರ ಬಂದಲ್ಲಿ ಕೂಡಲೇ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸ್ವಯಂ ರಕ್ಷಣೆಯಿಂದ ಮಂಗನ ಕಾಯಿಲೆ ತಡೆಗಟ್ಟಲು ಸಾಧ್ಯವಿದ್ದು ಆರೋಗ್ಯ ಇಲಾಖೆಯಿಂದ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
`ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯವಿರುವ ಔಷಧಗಗಳು ಮತ್ತು ಡೇಪಾ ತೈಲದ ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿ ಇರುವಂತೆ ಎಚ್ಚರವಹಿಸಬೇಕು. ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಶುಪಾಲನಾ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆ ಹೊಂದಿದ್ದು, ಕಾಯಿಲೆ ನಿಯಂತ್ರಣದ ಕಾರ್ಯದಲ್ಲಿ ಅತ್ಯಂತ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ನಟರಾಜ್, ಜಿಲ್ಲಾ ಮಲೇರಿಯಾಧಿಕಾರಿ ಡಾ. ಕ್ಯಾ ರಮೇಶ್ರಾವ್, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.