ರೈತರಿಗೆ ಸರ್ಕಾರ ನೀಡಿದ ಸೌಲಭ್ಯವೊಂದು ಅರಣ್ಯ ಇಲಾಖೆಯ ಬೀಗಿ ಆಡಳಿತದ ದೊಡ್ಡ ತಾಪತ್ರಯವಾಗಿ ಪರಿಣಮಿಸಿದೆ. ಸರ್ಕಾರ ಸೂಚಿಸಿದ ಪ್ರತಿಯೊಂದು ಕಠಿಣ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಿ ಮರ ಕಟಾವು ಮಾಡಿದರೂ ಶಿರಸಿ ಹುಳಗೋಳದ ಕೃಷಿಕರೊಬ್ಬರು ತಮಗೆ ಬರಬೇಕಾದ ಶಾಸನಬದ್ಧ ಹಕ್ಕಿನ ಹಣಕ್ಕಾಗಿ ಅರಣ್ಯ ಇಲಾಖೆಯ ಕಚೇರಿಗಳ ಬಾಗಿಲು ತಟ್ಟುವುದು ತಪ್ಪಿಲ್ಲ.
ಶಿರಸಿ ಹುಳಗೋಳದ ಕೃಷಿಕ ರವಿ ಗಜಾನನ ಹೆಗಡೆ ಅವರು ತಮ್ಮ ಸ್ವಾಧೀನದಲ್ಲಿದ್ದ ಸುಮಾರು 15 ಎಕರೆ ಬೆಟ್ಟ ಭೂಮಿಯಲ್ಲಿ ಶ್ರಮವಹಿಸಿ ಅಕೇಶಿಯಾ ಮರಗಳನ್ನು ಬೆಳೆಸಿದ್ದರು. ಮರಗಳು ಕಟಾವಿಗೆ ಬಂದ ನಂತರ, ಸರ್ಕಾರದ ನಿಯಮದಂತೆ ಅರಣ್ಯ ಇಲಾಖೆಯಿಂದ ಅಗತ್ಯ ಕಟಾವು ಅನುಮತಿ ಪಡೆದು ಇಲಾಖಾ ಸಿಬ್ಬಂದಿಯ ಸಮ್ಮುಖದಲ್ಲೇ ಮರಗಳನ್ನು ಕಡಿದು ತೆರವುಗೊಳಿಸಲಾಗಿತ್ತು. ಅರಣ್ಯ ಇಲಾಖೆಯ ಅಧಿಕೃತ ಲೆಕ್ಕಾಚಾರದಂತೆಯೇ ಒಟ್ಟು 98 ಮೀಟರ್ ಪ್ರಮಾಣದ ಮರಗಳನ್ನು ಮಾರಾಟ ಮಾಡಲಾಗಿತ್ತು. ಈ ಮಾರಾಟದಿಂದ ಬಂದ ಸಂಪೂರ್ಣ ಮೊತ್ತವು ಈಗಾಗಲೇ ನಿಯಮಾನುಸಾರ ಅರಣ್ಯ ಇಲಾಖೆಯ ಖಾತೆಗೆ ಜಮಾ ಆಗಿದೆ. ಆದರೆ, ನಿಯಮಾನುಸಾರ ಶೇ 75ರಷ್ಟು ಪ್ರಮಾಣದ ಆ ಹಣ ರೈತರ ಖಾತೆಗೆ ಬಂದಿಲ್ಲ.
ಆ ಹಣ ನೀಡಲು ಸಾಲು ಸಾಲು ಷರತ್ತುಗಳನ್ನು ಒಡ್ಡಿದ ಇಲಾಖೆ, ನಂತರದ ಹಂತದಲ್ಲಿ ಮರ ಕಟಾವು ಮಾಡಿದ ಜಮೀನಿನಲ್ಲಿ ಹೊಸದಾಗಿ ನೆಟ್ಟ ಗಿಡಗಳ ವಿವರ ಹಾಗೂ ಪೋಷಣೆಯ ಮಾಹಿತಿಯನ್ನು ಕೇಳಿತ್ತು. ಇವರು ಅದೇ ಬೆಟ್ಟದಲ್ಲಿ ಬಿದಿರು ಸಸಿ ನೆಟ್ಟು ಪೋಷಿಸುತ್ತಿರುವ ಪ್ರತಿಯೊಂದು ಮಾಹಿತಿಯನ್ನೂ ದಾಖಲೆ ಸಮೇತ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಇಷ್ಟೆಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ಅರಣ್ಯ ಇಲಾಖೆ ಮಾತ್ರ ಹಣ ಬಿಡುಗಡೆ ಮಾಡದೆ ಕೃಷಿಕರನ್ನು ಸತಾಯಿಸುತ್ತಿದೆ. ಬೆಟ್ಟ ಭೂಮಿ ಸವಲತ್ತುದಾರರನ್ನು ಪ್ರೋತ್ಸಾಹಿಸುವ ಸರ್ಕಾರದ ಆಶಯಕ್ಕೆ ಅಧಿಕಾರಿಗಳ ಈ ಧೋರಣೆ ಮಾರಕವಾಗಿದ್ದು, ತಕ್ಷಣವೇ ಕೃಷಿಕ ರವಿ ಗಜಾನನ ಹೆಗಡೆ ಅವರಿಗೆ ಬರಬೇಕಾದ ಹಕ್ಕಿನ ಹಣವನ್ನು ಬಿಡುಗಡೆ ಮಾಡಬೇಕೆಂದು ಕೃಷಿಕ ಸಮಾಜ ಆಗ್ರಹಿಸಿದೆ.
ಬೆಟ್ಟ ಜಾಗದಲ್ಲಿ ಅರಣ್ಯ ಕೃಷಿ ಮಾಡಿದ ಅನೇಕರು ಕೆನರಾ ವಲಯದಲ್ಲಿ ಇದ್ದಾರೆ. ಇದ್ದಾರೆ. ಹೀಗೆ ಹಣ ತಡೆ ಹಿಡಿದ್ದಿದ್ದು ಇವರಿಗೆ ಮಾತ್ರವೇ ಅಥವಾ ಇನ್ನು ಅನೇಕರು ಇದ್ದಾರೆಯೇ ಎಂಬ ಪ್ರಶ್ನೆ ಈಗ ಅನೇಕ ರೈತರಲ್ಲಿ ಎದ್ದಿದೆ. ಹತ್ತಾರು ನಿಯವಮವನ್ನು ಹೇಳಿ ರೈತರನ್ನು ಕಂಗಾಲು ಮಾಡುವ ಇಲಾಖೆ ತನ್ನ ಪಾಲಿನ ಹಣ ಮಾತ್ರವಲ್ಲದೆ, ರೈತನ ಪಾಲಿನ ಹಣವನ್ನು ಇಟ್ಟುಕೊಂಡು ಬಿಡುತ್ತದೆಯೋ ಎಂಬ ಅನುಮಾನವನ್ನು ಹಲವರು ವ್ಯಕ್ತ ಪಡಿಸಿದ್ದಾರೆ. ಅಲ್ಲದೆ, ಇಟ್ಟುಕೊಳ್ಳುತ್ತದೆಯೋ ಇಲಾಖೆಯಲ್ಲಿರುವವರ ಜೇಬು ಸೇರುತ್ತದೆಯೋ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.