ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರದಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ ನಡೆಯಲಿದ್ದು, ಲಾರಿ ಮಾಲಕರ ಸಂಘದವರು ಈ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಲಾರಿ ಟ್ರಾನ್ಸಪೋರ್ಟ ಡೆವಲಪಮೆಂಟ್ ವೆಲಫೇರ್ & ಸ್ಪೋರ್ಟ ಅಸೋಸಿಯೇಷನ್’ನ ಸರ್ವ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಸುಜಯ ಮರಾಠಾ ಅವರು ಮನವಿ ಮಾಡಿದ್ದಾರೆ.
`ಬೇಡ್ತಿ ಎಂಬುದು ಯಲ್ಲಾಪುರದ ಹೆಮ್ಮೆಯ ನದಿಯಾಗಿದ್ದು, ಈ ನದಿಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಪಶ್ಚಿಮಘಟ್ಟದ ಉಳಿವಿಗೆ ಬೇಡ್ತಿ ನದಿಯ ಕೊಡುಗೆ ಅಪಾರವಾಗಿದೆ. ಈ ನದಿಯನ್ನು ಬೇರೆ ಕಡೆ ತಿರುಗಿಸುವುದರಿಂದ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳು ಉದ್ಬವವಾಗಲಿದೆ. ಪರಿಸರದ ಜೊತೆ ಮುಂದಿನ ಪಿಳಿಗೆಯವರ ಸಂರಕ್ಷಣೆಗಾಗಿ ನಮ್ಮೂರಿನ ನದಿ ಉಳಿಸಲು ನಾವೇ ಹೋರಾಟ ನಡೆಸಬೇಕು. ಈ ಹಿನ್ನಲೆ ಸಂಘದ ಎಲ್ಲಾ ಸದಸ್ಯರು ಈ ಹೋರಾಟದಲ್ಲಿ ಭಾಗವಹಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.
`ಕುಡಿಯುವ ನೀರಿನ ಯೋಜನೆ ಎಂಬ ಹೆಸರಿನಲ್ಲಿ ಬೃಹತ್ ಉದ್ದಿಮೆಗಳಿಗೆ ನೀರು ಸರಬರಾಜು ಮಾಡುವ ಹುನ್ನಾರ ನಡೆದಿದೆ. ಇಲ್ಲಿನ ಕಾಡು-ಮೇಡುಗಳಿಗೆ ತೊಂದರೆ ನೀಡಿ ನೀರು ಒಯ್ಯುವುದು ಸರಿಯಲ್ಲ. ಸರ್ಕಾರ ಕೂಡಲೇ ಈ ಯೋಜನೆಯನ್ನು ಕೈ ಬಿಡಬೇಕು. ಜನರ ಭಾವನೆ ಹಾಗೂ ಬದುಕಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ನದಿ ಜೋಡಣೆಯ ವಿರೋಧ ಅತ್ಯಂತ ದೊಡ್ಡ ಪ್ರಮಾಣದಲ್ಲಿದ್ದು, ಸರ್ಕಾರ ಯೋಜನೆ ಕೈ ಬಿಡದೇ ಇದ್ದರೆ ಇನ್ನಷ್ಟು ವಿರೋಧವ್ಯಕ್ತವಾಗಲಿದೆ’ ಎಂದು ಅವರು ಹೇಳಿದ್ದಾರೆ.