ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆ ಅಸ್ತಿತ್ವದಲ್ಲಿದ್ದು ನೀರಾವರಿ ಭತ, ಮಳೆಯಾಶ್ರಿತ ಹೆಸರು, ಹುರುಳಿ, ಶೇಂಗಾ ಬೆಳೆಗಳಿಗಾಗಿ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಬೆಳೆಗಳಿಗೆ ಅನ್ವಯ ಆಗುವ ಹಾಗೇ ಇಲ್ಲಿನ ಆರು ತಾಲೂಕುಗಳು ಈ ವಿಮಾ ವ್ಯಾಪ್ತಿಗೆ ಒಳಪಡುತ್ತಿವೆ.
ಹಿಂಗಾರು ಹಂಗಾಮಿನ ಶೆಂಗಾ ಬೆಳೆಗೆ ಅಂಕೋಲಾ ತಾಲೂಕಿನ ಬೇಲೆಕೇರಿ, ಬಳಲೆ, ಬಾಸಗೋಡ ಹೋಬಳಿಯ ಎಲ್ಲಾ ಗ್ರಾಮದ ರೈತರು ವಿಮೆ ಮಾಡಿಸುವ ಅವಕಾಶವಿದೆ. ಕುಮಟಾ ತಾಲೂಕಿನ ಗೋಕರ್ಣ ಹೋಬಳಿಯಲ್ಲಿಯೂ ಶೆಂಗಾ ಬೆಳೆಯಲಾಗುತ್ತಿದ್ದು, ಅಲ್ಲಿನವರು ಸಹ ಬೆಳೆ ವಿಮೆ ಮಾಡಿಸಲು ಅರ್ಹರಾಗಿದ್ದಾರೆ. ಹೊನ್ನಾವರ ಹೋಬಳಿ ವ್ಯಾಪ್ತಿಯ ರೈತರು ನೀರಾವರಿ ಭತ್ತದ ಬೆಳೆಗೆ ವಿಮೆ ಮಾಡಿಸಬಹುದಾಗಿದೆ. ಮಳೆಯಾಶ್ರಿತ ಹೆಸರು ಹಾಗೂ ಹುರುಳಿ ಬೆಳೆಗಳಿಗೆ ಹಳಿಯಾಳ ತಾಲೂಕಿನ ಮುರ್ಕವಾಡ ಮತ್ತು ಹಳಿಯಾಳ ಹೋಬಳಿ ಹಾಗೂ ಮುಂಡಗೋಡ ತಾಲೂಕಿನ ಮುಂಡಗೋಡ ಹೋಬಳಿ ವ್ಯಾಪ್ತಿಯವರಿಗೆ ಅವಕಾಶಗಳಿವೆ. ಈ ಬೆಳೆ ವಿಮೆ ಮಾಡಿಸಲು ಇಚ್ಚಿಸುವವರಿಗೆ ವಿಮಾ ಕಂತು ಪಾವತಿಗೆ ಡಿಸೆಂಬರ್ 31 ಕೊನೆ ದಿನ.
ಬೇಸಿಗೆ ಹಂಗಾಮಿನ ನೀರಾವರಿ ಭತ್ತದ ಬೆಳೆಗೆ ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮ ಪಂಚಾಯತ ಹಾಗೂ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ್ ಒಳಪಡುತ್ತದೆ. ಬೇಸಿಗೆ ಹಂಗಾಮಿನ ವಿಮಾ ಕಂತು ಪಾವತಿಸಲು 2027ರ ಫೆಬ್ರವರಿ 26 ಕೊನೆ ದಿನ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ರೈತರು ಹೆಚ್ಚಿನ ಮಾಹಿತಿಗಾಗಿ ವಿಮಾ ಕಂಪನಿ ಪ್ರತಿನಿಧಿ, ಬ್ಯಾಂಕು, ವ್ಯವಸಾಯ ಸೇವಾ ಸಹಕಾರಿ ಸಂಘ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ಈ ಕುರಿತು ಕಾರವಾರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮಾಹಿತಿ ನೀಡಿದ್ದು, ಅಲ್ಲಿಯೂ ಸಂಪರ್ಕಿಸಬಹುದಾಗಿದೆ.