`ಅವರು ಹರಿಜನ. ನಾವು ಬ್ರಾಹ್ಮಣ. ಅವರು ನೆಟ್ಟ ತೆಂಗಿನ ಮರ ನಮ್ಮ ಮನೆ ಕಡೆ ವಾಲಿದ್ದು, ಅದರಿಂದ ದೊಡ್ಡ ಸಮಸ್ಯೆ ಆಗಿದೆ’ ಎಂದು ಯಲ್ಲಾಪುರ ಇಡಗುಂದಿಯ ನೀಲಕಂಠ ಹೆಗಡೆ ಅವರು ಪ್ರಜಾ ಸೇವೆ ಆಂದೋಲನಕ್ಕೆ ಆಗಮಿಸಿ ಅವಲತ್ತುಕೊಂಡಿದ್ದಾರೆ. ಪಕ್ಕದ ಮನೆಯವರ ತೆಂಗಿನ ಮರದಿಂದ ಆದ ಹಾನಿಯ ಬಗ್ಗೆ ಫೋಟೋ ಹಿಡಿದು ಬಂದಿದ್ದ ಅವರು ಕಾಯಿ ಬಿದ್ದು ಹಂಚು ಒಡೆದಿರುವುದನ್ನು ಸಚಿವ ಲಕ್ಷ್ಮಣ ಸವದಿ ಅವರಿಗೆ ತೋರಿಸಿದ್ದಾರೆ.
ಯಲ್ಲಾಪುರದ ಇಡಗುಂದಿಯ ಜನತಾ ಕಾಲೋನಿಯಲ್ಲಿ ನೀಲಕಂಠ ಹೆಗಡೆ ಅವರು ವಾಸವಾಗಿದ್ದಾರೆ. ಅದೇ ಭಾಗದ 4ನೇ ಓಣಿಯಲ್ಲಿ ಯಲ್ಲಪ್ಪ ಹರಿಜನ ಅವರು ವಾಸವಾಗಿದ್ದಾರೆ. ಯಲ್ಲಪ್ಪ ಹರಿಜನ ಅವರ ಜಮೀನಿನಲ್ಲಿರುವ ತೆಂಗಿನ ಮರ ನೀಲಕಂಠ ಹೆಗಡೆ ಅವರ ಮನೆ ಮೇಲೆ ವಾಲಿದೆ. ಪರಿಣಾಮ ತೆಂಗಿನ ಮರದಿಂದ ಬಿದ್ದ ಕಾಯಿಗಳು ಮನೆಯ ಹಂಚು ಒಡೆಯುತ್ತಿವೆ. ಸ್ಲಾಪಿನ ಮನೆ ಕಟ್ಟಲು ನೀಲಕಂಠ ಹೆಗಡೆ ಅವರಿಂದ ಸಾಧ್ಯವಾಗಿಲ್ಲ. ತೆಂಗಿನ ಮರ ತೆಗೆಯಲು ಯಲ್ಲಪ್ಪ ಹರಿಜನ ಅವರಿಗೆ ಮನಸ್ಸಿಲ್ಲ. ಹೀಗಾಗಿ ಈ ವಿಷಯ ಗ್ರಾಮ ಪಂಚಾಯತ, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಲ್ಲಿಯೂ, ಸಮಸ್ಯೆ ಬಗೆಹರಿಯದ ಕಾರಣ ಪ್ರಜಾ ಸೇವೆ ಆಂದೋಲನಕ್ಕೆ ಆಗಮಿಸಿದ್ದು, ಅಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಶನಿವಾರ ಯಲ್ಲಾಪುರದ ಕಾರ್ಮಿಕ ಭವನದಲ್ಲಿ ನಡೆದ ಪ್ರಜಾ ಸೇವೆ ಆಂದೋಲನದಲ್ಲಿ ಅರ್ಜಿ ಸಲ್ಲಿಸಿ ಮಾತನಾಡಿದ ನೀಲಕಂಠ ಹೆಗಡೆ ಅವರು `ಅವರು ಹರಿಜನ. ನಾವು ಬ್ರಾಹ್ಮಣ. ಹೀಗಾಗಿ ತೆಂಗಿನ ಮರದ ಕಾಯಿ ಬಿದ್ದರೂ ಏನೂ ಹೇಳಲಾಗುತ್ತಿಲ್ಲ. ತೆಂಗಿನ ಮರದ ಕಾಟದಿಂದ ಮುಕ್ತಿ ಕೊಡಿಸಿ’ ಎಂದು ಮೈಕಿನಲ್ಲಿ ಹೇಳಿದರು. ಇದನ್ನು ಕೇಳಿದ ಸಚಿವ ಲಕ್ಷ್ಮಣ ಸವದಿ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಅವರು ಕೂಡಲೇ ಇಡಗುಂದಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಕರೆಯಿಸಿ ವಿಚಾರಿಸಿದರು. `ಶಿರಸಿಯಲ್ಲಿ ಸಹ ಇಂಥಹುದೇ ಸಮಸ್ಯೆ ಆಗಿತ್ತು. ಅದನ್ನು ಬಗೆಹರಿಸಲು ಸೂಚಿಸಲಾಗಿದೆ. ಇಲ್ಲಿಯೂ ಯಾರಿಗೂ ಸಮಸ್ಯೆ ಆಗದ ಹಾಗೇ ನೋಡಿಕೊಳ್ಳಬೇಕು’ ಎಂದು ಸಚಿವ-ಶಾಸಕರು ತಾಕೀತು ಮಾಡಿದರು.