ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಮೀಪ್ರಿಯಾ ಅವರು ಇಲ್ಲಿಂದ ವರ್ಗವಾಗಿದ್ದಾರೆ. ನೆರೆ ಪ್ರವಾಹ, ಗುಡ್ಡ ಕುಸಿತದಂಥ ಆಕಸ್ಮಿಕ ಅವಘಡಗಳನ್ನು ಸಮರ್ಥವಾಗಿ ಎದುರಿಸಿದ್ದ ಅವರು `ಈ ಜಿಲ್ಲೆಯಲ್ಲಿ ಕೆಲಸ ಮಾಡಿದ ಅನುಭವವನ್ನು ಎಂದಿಗೂ ಮರೆಯಲು ಅಸಾಧ್ಯ’ ಎಂದು ಹೇಳಿದ್ದಾರೆ.
ಕೆ ಲಕ್ಮೀಪ್ರಿಯಾ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಎರಡುವರೆ ವರ್ಷ ಕೆಲಸ ಮಾಡಿದ್ದರು. ಶಿರೂರು ಗುಡ್ಡ ಕುಸಿತ ದುರಂತ, ಕಾಳಿ ಸೇತುವೆ ಕುಸಿತ, ಜನಗಣತಿ, ಎಸ್.ಐ.ಆರ್ ಸೇರಿ ಅನೇಕ ಸನ್ನಿವೇಶಗಳಲ್ಲಿ ಅವರು ಹಗಲು-ರಾತ್ರಿ ಶ್ರಮಿಸಿದ್ದರು. ಮುಂದಾಲೋಚನೆಯ ನಿಲುವುಗಳನ್ನು ತಮ್ಮೊಳಗಿರಿಸಿಕೊಂಡು ಅವರು ಕೆಲಸ ಮಾಡುತ್ತಿದ್ದರು. ಕೇಣಿ ಬಂದರು ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಗಳಲ್ಲಿಯೂ ಅವರು ತಾಳ್ಮೆ ಕಳೆದುಕೊಳ್ಳದೇ ಕರ್ತವ್ಯ ನಿಭಾಯಿಸಿದ್ದರು. ಆಡಳಿತವಾಗಿ ಕಡತ ವಿಲೇವಾರಿಗೆ ವೇಗ ನೀಡಿದ್ದರು. ಬಗರ್ ಹುಕುಂ ವಿಷಯದಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಹಕ್ಕುಪತ್ರ ನೀಡಿದ್ದರು.
ಕಂದಾಯ ಸಿಬ್ಬಂದಿಗೆ ಪದೋನ್ನತಿ ನೀಡುವ ಮೂಲಕ ಅವರಿಗೂ ಉತ್ತೇಜನ ನೀಡಿದ್ದರು. 8 ವರ್ಷದ ನಂತರ ಕರಾವಳಿ ಉತ್ಸವಕ್ಕೆ ಮರು ಚಾಲನೆ ನೀಡಿದ್ದರು. ಲಕ್ಮೀಪ್ರಿಯಾ ಅವರ ಬೀಳ್ಕೊಡುಗೆ ಸಮಾರಂಬದಲ್ಲಿ ಈ ಎಲ್ಲಾ ವಿಷಯವನ್ನು ಅಧಿಕಾರಿ-ಜನಪ್ರತಿನಿಧಿ ಹಾಗೂ ಮಾಧ್ಯಮದವರು ನೆನಪಿಸಿಕೊಂಡರು. `ತಮ್ಮೆಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ’ ಎಂದು ಲಕ್ಮೀಪ್ರಿಯಾ ಅವರು ಸ್ಮರಿಸಿದರು.
ಹೊಸ ಡೀಸಿ ಅಧಿಕಾರ ಸ್ವೀಕಾರ
ಉತ್ತರ ಕನ್ನಡ ಜಿಲ್ಲಾಧಿಕಾರಿಯಗಿ ಬೋಯರ್ ಹರ್ಷಲ್ ನಾರಾಯಣ ರಾವ್ ಬುಧವಾರ ಅಧಿಕಾರ ಸೀಕರಿಸಿದ್ದಾರೆ. ಮೂಲತಃ ಮಹಾರಾಷ್ಟ ರಾಜ್ಯದವರಾದ ಇವರು 2016ರ ಬ್ಯಾಚಿನನ ಐ.ಎ.ಎಸ್.ಅಧಿಕಾರಿಯಾಗಿದ್ದು, ಈ ಮೊದಲು ಸವಣೂರು ತಾಲೂಕಿನಲ್ಲಿ ಉಪ ವಿಭಾಗಾಧಿಕಾರಿ, ಬೆಳಗಾವಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯಾದಗಿರಿ ಜಿಲ್ಲಾಧಿಕಾರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ನಾಗರೀಕ ಸೇವೆಗಳ ವಿದ್ಯುನ್ಮಾನ ವಿತರಣೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವಹೊಂದಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರ ಅಗತ್ಯವಾಗಿದ್ದು, ಜಿಲ್ಲೆಯ ಅಭಿವೃದ್ದಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ’ ಎಂದು ಅವರು ಹೇಳಿದ್ದಾರೆ. `ಮುಖ್ಯಮಂತ್ರಿಗಳ ನೂತನ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕ ರೀತಿಯಲ್ಲಿ ತಲುಪಿಸೋಣ, ಜನತೆಗೆ ಉತ್ತಮ ಆಡಳಿತ ನೀಡುವ ಪ್ರಾಮಾಣಿಕ ಕೆಲಸ ಮಾಡೋಣ’ ಎಂದಿದ್ದಾರೆ.