ಓಂ ಬೀಚ್ ಕಡೆಯಿಂದ ಕುಡ್ಲೆ ಬೀಚ್’ಗೆ ತೆರಳುವ ಮಾರ್ಗ ಮಧ್ಯೆ ಚಿರತೆ ಕಾಣಿಸಿದೆ. ಪ್ರವಾಸಿಗರನ್ನು ನೋಡಿಯೂ ಕದಲದ ಆ ವ್ಯಾಘ್ರ ಪೊಲೀಸ್ ಜೀಪಿನ ಸೈರನ್ ಸದ್ದಿಗೆ ಬೆಚ್ಚು ಬಿದ್ದಿದೆ. ಗೋಕರ್ಣ ಪೊಲೀಸ್ ಸಿಬ್ಬಂದಿ ರಾಜೇಶ್ ನಾಯ್ಕ, ಪರಮೇಶ್ವರ ಬೆಂಡಲಗಟ್ಟಿ ಹಾಗೂ ಪ್ರಕಾಶ್ ಮುಳ್ಳಿ ಅವರು ಚಿರತೆಯನ್ನು ಬೆದರಿಸಿದ್ದಾರೆ.
ನವೆಂಬರ್ 8ರ ರಾತ್ರಿಪಶ್ಚಿಮ ಬಂಗಾಳ ಮೂಲದ ನಾಲ್ವರು ಪ್ರವಾಸಿಗರು ಓಂ ಬೀಚ್’ನಿಂದ ತಾವಿದ್ದ ಕುಡ್ಲೆ ಬೀಚ್ ರೆಸಾರ್ಟ್ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಅವರಿಗೆ ಚಿರತೆಯೊಂದು ಎದುರಾಯಿತು. ಕತ್ತಲಿನಲ್ಲಿ ಬ್ಯಾಟರಿ ಹೊಡೆದಾಗ ಹೊಳೆಯುವ ಕಣ್ಣು ನೋಡಿ ಅವರು ಅಚ್ಚರಿಗೆ ಒಳಗಾದರು. ಜೊತೆಗೆ ರಸ್ತೆ ಮೇಲೆ ಚಿರತೆ ಘರ್ಜಿಸುವುದನ್ನು ನೋಡಿ ಭಯಗೊಂಡರು. ಎಷ್ಟು ಸಮಯ ಕಳೆದರೂ ಚಿರತೆ ಅಲ್ಲಿಂದ ಕದಲಲಿಲ್ಲ. ಪ್ರವಾಸಿಗರ ಸಂಚಾರಕ್ಕೆ ಅನುಕೂಲವಾಗುವ ಹಾಗೇ ದಾರಿಯನ್ನು ಬಿಡಲಿಲ್ಲ.
ಇದರಿಂದ ಕಂಗಾಲಾದ ಪ್ರವಾಸಿಗರು ಪೊಲೀಸರಿಗೆ ಫೋನ್ ಮಾಡಿದರು. 112ಗೆ ಡೈಲ್ ಮಾಡಿದ ನಿಮಿಷದೊಳಗೆ ಅಲ್ಲಿ ಪೊಲೀಸ್ ಜೀಪು ಆಗಮಿಸಿತು. ಪೊಲೀಸ್ ಜೀಪಿನ ಸೈರನ್ ಸದ್ದು ಕೇಳಿ ಚಿರತೆ ಅಲ್ಲಿಂದ ಕದಲಿತು. ಜೀಪು ಸಮೀಪ ಬಂದಾಗ ಅಲ್ಲಿನ ಕಾಡಿನ ಕಡೆ ಚಿರತೆ ಓಡಿತು. ಭಯಗೊಂಡ ಪ್ರವಾಸಿಗರನ್ನು ಪೊಲೀಸರು ಸಮಾಧಾನ ಮಾಡಿದರು.
ನಡೆದು ಹೋಗುತ್ತಿದ್ದ ಆ ನಾಲ್ವರನ್ನು ಜೀಪಿನಲ್ಲಿ ಕೂರಿಸಿ ಅವರಿದ್ದ ರೆಸಾರ್ಟಿಗೆ ಬಿಟ್ಟು ಬಂದರು. ತುರ್ತು ಸಮಯದಲ್ಲಿ ನೆರವಿಗೆ ಬಂದ ಪೊಲೀಸರಿಗೆ ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದರು.