ನೆರೆ ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ಸೋಮನಳ್ಳಿಯ ಪುರುಷಾ ಕುಣಬಿ ಅವರು ಸದ್ಯ ಹೊಸ ಮನೆ ನಿರ್ಮಿಸುತ್ತಿದ್ದು, ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ಜಾರಿ ಆದರೆ ಅವರ ಹೊಸ ಮನೆಯೂ ಮುಳುಗಡೆಯಾಗಲಿದೆ. ಇದರೊಂದಿಗೆ ಫಲವತ್ತಾಗಿ ಬೆಳೆದ ಭತ್ತದ ಭೂಮಿ, ಅಡಿಕೆ ತೋಟ ನಾಶವಾಗಲಿದ್ದು, ಅವರ ಕೃಷಿ ಕಾಯಕವೂ ಅಲ್ಲಿಗೆ ಮುಕ್ತಾಯವಾಗುವ ಸಾಧ್ಯತೆಗಳಿವೆ.
ಯಲ್ಲಾಪುರ ತಾಲೂಕಿನ ಮಂಚಿಕೇರಿಯಿoದ ಅನತಿ ದೂರದಲ್ಲಿರುವ ಸೋಮನಳ್ಳಿಯಲ್ಲಿ ಪುರುಷಾ ಕುಣಬಿ ಅವರು ವಾಸವಾಗಿದ್ದಾರೆ. ತಲೆತಲಾಂತರದಿ0ದ ಬಂದ ಭೂಮಿಯಲ್ಲಿ ಅವರು ಚಿಕ್ಕ ಜೋಪಡಿ ಕಟ್ಟಿಕೊಂಡು ಬದುಕುತ್ತಿದ್ದಾರೆ. ಪುರುಷ ಕುಣಬಿ ಅವರು ಬೇಡ್ತಿ ಹೊಳೆ ಅಂಚಿನ ಸಮೀದಪ ಮೊದಲ ಮಾಲ್ಕಿ ಭೂಮಿಯ ಮಾಲಕರಾಗಿದ್ದು, ಈ ನದಿ ತಿರುವು ಯೋಜನೆ ವಿಷಯ ಅವರ ನಿದ್ದೆಗೆಡಿಸಿದೆ.
2021ರಲ್ಲಿ ಯಲ್ಲಾಪುರದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿತ್ತು. ಆ ವೇಳೆ ಬೇಡ್ತಿ ನದಿ ತುಂಬಿ ಹರಿದಿದ್ದು, ಕೃಷಿ ಹಾಗೂ ತೋಟಗಾರಿಕಾ ಪ್ರದೇಶ ನೀರಿನಲ್ಲಿ ಮುಳುಗಿತ್ತು. ಪ್ರತಿ ವರ್ಷ ತೋಟ-ಗದ್ದೆಗೆ ನೀರು ನುಗ್ಗುತ್ತಿದ್ದರೂ ಎರಡು ತಾಸಿನೊಳಗೆ ಆ ನೀರು ನದಿ ಮೂಲಕ ಮುಂದೆ ಚಲಿಸುತ್ತಿತ್ತು. ಆದರೆ, 2021ರಲ್ಲಿ ಮಾತ್ರ ದಿನ ಕಳೆದರೂ ನೀರಿನ ಮಟ್ಟ ಮಾತ್ರ ಇಳಿಕೆ ಆಗುತ್ತಿರಲಿಲ್ಲ. ಹಂತ ಹಂತವಾಗಿ ನೀರಿನ ಮಟ್ಟ ಏರಿಕೆ ಆಗುತ್ತಲೇ ಇದ್ದು, ಆ ದಿನ ರಾತ್ರಿ 8 ಗಂಟೆಯ ವೇಳೆಗೆ ಪುರುಷು ಕುಣಬಿ ಅವರ ಮಣ್ಣಿನ ಮನೆ ನೀರಿನಲ್ಲಿ ಮುಳುಗಿತು. ನೀರು ಏರುವುದನ್ನು ನೋಡಿದ ಕುಟುಂಬದವರು ಪಾತ್ರೆ-ಪಗಡೆಯೊಂದಿಗೆ ಬೆಟ್ಟ ಹತ್ತಿ ಬದುಕು ಉಳಿಸಿಕೊಂಡಿದ್ದರು. ಆದರೆ, ಆ ಮನೆಯನ್ನು ಉಳಿಸಲು ಸಾಧ್ಯವಾಗಿರಲಿಲ್ಲ.
ಮನೆ ಕುಸಿತದಿಂದ ಕಂಗಾಲಾದ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ ಹಣ ಬಂದಿತು. ಆದರೆ, ಆ ಹಣದಿಂದ ಪುರುಷು ಕುಣಬಿ ಅವರಿಗೆ ಸಂತತ್ರ ಸೂರು ನಿರ್ಮಿಸಿಕೊಳ್ಳಲು ಆಗಿರಲಿಲ್ಲ. ಹಂತ ಹಂತವಾಗಿ ಮನೆ ನಿರ್ಮಾಣ ಕೆಲಸ ಮಾಡಿದ ಅವರು ಐದು ವರ್ಷ ಶ್ರಮಿಸಿ ಸದ್ಯ ಹೊಸ ಮನೆ ಕಟ್ಟಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಅನುಸಾರವಾಗಿ ಇನ್ನೇನೂ ಕೆಲವೇ ವರ್ಷಗಳಲ್ಲಿ ಆ ಮನೆ ಕೆಲಸ ಮುಕ್ತಾಯವಾಗಲಿದೆ. ಆದರೆ, ಹೊಸ ಮನೆಗೆ ಪ್ರವೇಶಿಸುವ ಮುನ್ನವೇ ಅವರಿಗೆ ನದಿ ತಿರುವು ಯೋಜನೆಯ ಆಘಾತಕರ ಸುದ್ದಿ ಬಂದಿದ್ದು, ಈ ಯೋಜನೆ ಜಾರಿ ಆದರೆ ಎತ್ತರ ಪ್ರದೇಶದಲ್ಲಿ ಕಟ್ಟುತ್ತಿರುವ ಹೊಸ ಮನೆಯೂ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಜೊತೆಗೆ ಸಮೃದ್ಧವಾದ ಭತ್ತ-ಅಡಿಕೆ ಬೆಳೆಯ ಪ್ರದೇಶವೂ ನೀರು ಪಾಲಾಗುವ ಆತಂಕದಲ್ಲಿ ಅವರಿದ್ದಾರೆ.
`20 ವರ್ಷದ ಹಿಂದೆಯೇ ಬೇಡ್ತಿ ನದಿಯ ಸಮೀಕ್ಷೆ ನಡೆದಿತ್ತು. ಆಗಿನಿಂದ ಈಗಿನವರೆಗೂ ನಾವು ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದು, ಸದ್ಯ ಮತ್ತೆ ಮನೆ ಮೇಲೆ ವಿಮಾನ ಹಾರಾಟ ನಡೆದಿದೆ. ಯಾರು ಯಾರೋ ಬರುತ್ತಾರೆ. ಏನೇನೋ ಕೇಳುತ್ತಾರೆ. ನಮಗೆ ಮಾತ್ರ ಏನೂ ಗೊತ್ತಾಗುತ್ತಿಲ್ಲ’ ಎಂದು ಪುರುಷಾ ಕುಣಬಿ ಕೊಂಕಣಿ ಮಿಶ್ರಿತ ಕನ್ನಡದಲ್ಲಿ ಮಾತಿಗೆ ಸಿಗುತ್ತಾರೆ. ನದಿ ತಿರುವುನಂಥಹ ಅವೈಜ್ಞಾನಿಕ ಯೋಜನೆ ಪರಿಸರ ವಿರೋಧಿ ಎಂದು ಓದು-ಬರಹ ಬಾರದ ಪುರುಷು ಕುಣಬಿ ಅವರಿಗೂ ಮನವರಿಕೆ ಆಗಿದ್ದು, `ಯೋಜನೆ ಜಾರಿ ಮಾಡಿಯೇ ಸಿದ್ಧ’ ಎಂದು ಆಸಕ್ತಿವಹಿಸಿದವರಿಗೆ ಮಾತ್ರ ಇಂಥವರ ನೋವು ಅರ್ಥವಾಗುತ್ತಿಲ್ಲ.