ಅವೈಜ್ಞಾನಿಕ ನದಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆ ಹಿನ್ನಲೆ ವಿವಿಧ ಹೊಟೇಲ್-ಅಂಗಡಿಕಾರರು ಸ್ವಯಂ ಪ್ರೇರಿತ ಬಂದ್ ಮಾಡುವ ಸಾಧ್ಯತೆಯಿದ್ದು, ಹುಬ್ಬಳ್ಳಿ-ಅಂಕೋಲಾ ಮಾರ್ಗದಲ್ಲಿ ಓಡಾಡುವವರಿಗೆ ಉಚಿತ ಊಟದ ವ್ಯವಸ್ಥೆ ಮಾಡುವುದಾಗಿ ಗಣಪತಿ ನಾಯಕ ಮೂಲೆಮನೆ ಅವರು ಘೋಷಿಸಿದ್ದಾರೆ.
`ನದಿ ತಿರುವು ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ಅತ್ಯಂತ ಯೋಗ್ಯ ನಿರ್ಧಾರ. ಪ್ರತಿಭಟನಾಕಾರರ ಮನವಿಯನ್ನು ಸರ್ಕಾರ ಆಲಿಸಿ, ಕೂಡಲೇ ಆ ಯೋಜನೆ ರದ್ಧು ಮಾಡಬೇಕು’ ಎಂದು ಸಹ ಗಣಪತಿ ನಾಯಕ ಮೂಲೆಮನೆ ಅವರು ಆಗ್ರಹಿಸಿದ್ದಾರೆ. `ಪ್ರತಿಭಟನೆ ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಸಮಸ್ಯೆ ಅನುಭವಿಸುವ ಸಾಧ್ಯತೆಯಿದೆ. ಈ ಹಿಂದೆ ನಡೆದ ಅನೇಕ ಪ್ರತಿಭಟನೆಯಲ್ಲಿ ವಿವಿಧ ವಾಹನ ಚಾಲಕರು ಹಾಗೂ ಲಾರಿ ಚಾಲಕರು ಹಸಿವಿನಿಂದ ತೊಂದರೆ ಅನುಭವಿಸಿದ್ದು, ಅದನ್ನು ಮನಗಂಡು ಅವರ ಹಸಿವು ನೀಗಿಸುವುದಕ್ಕಾಗಿ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಉತ್ತರ ಕನ್ನಡ ಜಿಲ್ಲಾ ಲಾರಿ ಟ್ರಾನ್ಸಪೋರ್ಟ ಡೆವಲಪಮೆಂಟ್ ವೆಲಫೇರ್ & ಸ್ಪೋರ್ಟ ಅಸೋಸಿಯೇಷನ್ ಗೌರವಾಧ್ಯಕ್ಷರೂ ಆಗಿರುವ ಗಣಪತಿ ನಾಯಕ ಮೂಲೆಮನೆ ಅವರು ಮಾಹಿತಿ ನೀಡಿದ್ದಾರೆ.
`ಪ್ರತಿಭಟನೆ ಅಂಗವಾಗಿ ಹೆದ್ದಾರಿ ಮೇಲೆ ಅನೇಕ ವಾಹನ ನಿಲ್ಲುವ ಸಾಧ್ಯತೆಯಿದೆ. ಆ ವಾಹನದಲ್ಲಿರುವವರು ಈ ಸೌಲಭ್ಯದ ಪ್ರಯೋಜನಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ. `ಯಲ್ಲಾಪುರದಿಂದ 35ಕಿಮೀ ಹಾಗೂ ಅಂಕೋಲಾದಿoದ 30ಕಿಮೀ ದೂರದಲ್ಲಿ ಬೆಳಗ್ಗೆ ಉಪಹಾರ, ಕುಡಿಯುವ ನೀರು ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಭಟನೆಗೆ ಆಗಮಿಸುವವರಿಗೆ ಯಲ್ಲಾಪುರದಲ್ಲಿಯೂ ಸಂಘಟಕರು ಊಟ-ಪಾನೀಯ ವ್ಯವಸ್ಥೆ ಮಾಡಿದ್ದು, ಅದಕ್ಕೆ ಸಹ ನಮ್ಮ ಸಂಘ ಸಹಕಾರ ನೀಡುತ್ತಿದೆ’ ಎಂದವರು ಹೇಳಿದ್ದಾರೆ. `ಸರ್ಕಾರದ ಅವೈಜ್ಞಾನಿಕ ಯೋಜನೆಗಳು ಶಾಶ್ವತವಾಗಿ ನಿಲ್ಲಬೇಕು. ಇಲ್ಲಿನ ನದಿ ಪರಿಶುದ್ಧವಾಗಿರಬೇಕು. ಅದಕ್ಕೆ ಎಂಥಹ ಹೋರಾಟ ಬಂದರೂ ನಾವು ಸಿದ್ಧರಿದ್ದೇವೆ’ ಎಂದು ಸಹ ಅವರು ಹೇಳಿದ್ದಾರೆ.