`ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಬಾಕಿ ಮೊತ್ತ ಎರಡು ವಾರದಲ್ಲಿ ಜಮಾ ಆಗಲಿದೆ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಅವರು ಹೇಳಿದ್ದಾರೆ. `ಅಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳ ಮೊತ್ತ ಪಾವತಿ ಬಗ್ಗೆ ಈಗಾಗಲೇ ಬಿಲ್ ಸಿದ್ದಪಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಗುರುವಾರ ಜಿಲ್ಲಾ ಪಂಚಾಯತ್ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವರ್ಚುಚಲ್ ಭಾಗವಹಿಸಿದ ಅವರು ಈ ಬಗ್ಗೆ ಮಾತನಾಡಿದ್ದಾರೆ. `ಹಣ ಬಿಡುಗಡೆ ವಿಷಯವಾಗಿ ಬಿಲ್ ಸಿದ್ಧವಾಗಿದೆ. 15 ದಿನದ ಒಳಗೆ ಈ ಮೊತ್ತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ’ ಎಂದವರು ಹೇಳಿದ್ದಾರೆ. `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇದಕ್ಕಾಗಿ ಎಲ್ಲಾ ಬಗೆಯ ತಯಾರಿ ನಡೆದಿದೆ’ ಎಂದವರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ `ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಹಾಸ್ಟೇಲಿನಲ್ಲಿ ನೀಡುವ ಬಿಸಿಯೂಟ ಪೌಷ್ಟಿಕಾಂಶದಿoದ ಕೂಡಿರಬೇಕು. ಈ ಕುರಿತು ಅಧಿಕಾರಿಗಳು ಶಾಲೆ-ಹಾಸ್ಟೇಲಿಗೆ ದಿಢೀರ್ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಬೇಕು’ ಎಂದು ಸಹ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
`ಎಲ್ಲಾ ಅಂಗನವಾಡಿಗಳು ಸೇರಿದಂತೆ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಆಹಾರ ವಿತರಣೆ ಮಾಡುವ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ವಿತರಣೆ ಮಾಡಬೇಕು. ಆಹಾರ ಸಿದ್ದಪಡಿಸುವ ಸ್ಥಳಗಳಲ್ಲಿ ಸ್ವಚ್ಛತೆ ಇರಬೇಕು. ನಿಗಧಿತ ಪೌಷ್ಠಿಕಾಂಶಗಳನ್ನು ಒಳಗೊಂಡ ಆಹಾರವನ್ನು ವಿತರಣೆ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದ್ದಾರೆ. `ಶಾಲೆಗಳಲ್ಲಿ ನಿರ್ಮಿಸುವ ಬಿಸಿಯೂಟ ಸಿದ್ದಪಡಿಸುವ ಕೊಠಡಿಗಳಲ್ಲಿ ವಸ್ತುಗಳನ್ನು ದಾಸ್ತಾನು ಮಾಡಲು ಸ್ಟೋ ರೂಂ ಸೌಲಭ್ಯ ಇರುವ ರೀತಿಯಲ್ಲಿ ಮತ್ತು ಇತರೇ ಎಲ್ಲಾ ಅಗತ್ಯ ಸೌಲಭ್ಯಗಳು ಹಾಗೂ ಸೂಕ್ತ ಭದ್ರತೆ ಇರುವಂತೆ ನಿರ್ಮಿಸಬೇಕು. ಆಹಾರ ಸಿದ್ದಪಡಿಸುವವರಿಗೆ ಮತ್ತು ಸಹಾಯಕರಿಗೆ ನಿಗಧಿತವಾಗಿ ವೇತನ ನೀಡಬೇಕು. ಇದರಲ್ಲಿ ವಿಳಂಬ ಮಾಡಿದರೆ ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.
`ಜಿಲ್ಲೆಯ ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. 15ನೇ ಹಣಕಾಸು ಯೋಜನೆಯಡಿ ಹೊಸದಾಗಿ ಮಂಜೂರಾಗಿರುವ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗಳಿಸಬೇಕು. ಶಿರಸಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಎಸ್ಆರ್ ಅಡಿ ಮಕ್ಕಳಿಗಾಗಿ ಸ್ಥಾಪಿಸಲು ಉದ್ದೇಶಿಸಿರುವ ಆರಂಭಿಕ ಹಸ್ತಕ್ಷೇಪ ಕೇಂದ್ರವನ್ನು ಸ್ಥಾಪಿಸಲು ಕ್ರಮ ಜರುಗಿಸಬೇಕು’ ಎಂದು ತಿಳಿಸಿದರು.
`ಎಸ್.ಎಸ್.ಎಲ್.ಸಿ ಫಲಿತಾಂಶ ವೃದ್ದಿ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸುವಂತೆ ಮತ್ತು ಗೈರು ಹಾಜರಿ ಮಕ್ಕಳ ಬಗ್ಗೆ ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಕರೆತರುವಂತೆ ಹಾಗೂ ಪಿಎಂ ಪೋಷಣ್ ಕಾರ್ಯಕ್ರಮದಡಿಯಲ್ಲಿ ಶಾಲೆಗಳಲ್ಲಿ ನ್ಯೂಟ್ರಿ ಗಾರ್ಡನ್ ನಿರ್ಮಾಣ ಮಾಡುವಂತೆ ಮತ್ತು ಶಾಲೆಗಳಲ್ಲಿ ಬಯೋ ಗ್ಯಾಸ್ ಘಟಕಗಳನ್ನು ಅಳವಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಸಬೇಕು’ ಎಂದು ತಿಳಿಸಿದರು. `ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ಯೋಜನೆಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ರೈತರನ್ನು ಒಳಗೊಂಡ ವಾಟ್ಸಾಪ್ ಗುಂಪುಗಳನ್ನು ರಚಿಸಿ ಅದರಲ್ಲಿ ಅವರಿಗೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಬೇಕು. ಮಳೆ ಮಾಪನ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಪರಿಶೀಲಿಸಬೇಕು’ ಎಂದರು. `ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೆಕು, ಕ್ರಿಯಾ ಯೋಜನೆಯಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದ ಅವರು ಇತ್ತೀಚಿಗೆ ಶಿರಸಿಯಲ್ಲಿ ಬಾವಿಗಳಲ್ಲಿ ತೈಲ ಮಿಶ್ರಿತ ನೀರು ಕಂಡುಬAದಿರುವ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ, ಕಾರಣ ಪತ್ತೆ ಹಚ್ಚಿ ಸಮಸ್ಯೆಗೆ ಪರಿಹರ ಒದಗಿಸಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿ ಪಂ ಸಿಇಓ ದಿಲೀಷ್ ಶಶಿ, ಉಪ ಕಾರ್ಯದರ್ಶಿಗಳಾದ ಅಲ್ಲಾಬಕಷ್, ಪ್ರಕಾಶ್ ಹಾಲಮ್ಮನವರ್, ಮುಖ್ಯ ಲೆಕ್ಕಾಧಿಕಾರಿ ಆನಂದ್ ಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.