`ಪಶ್ಚಿಮಘಟ್ಟದ ನೈಜ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಭೌತಿಕ ಸರ್ವೆ ಹಾಗೂ ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಬೇಕು. ಜನವಸತಿ ಮತ್ತು ಸಾಗುವಳಿ ಪ್ರದೇಶಗಳನ್ನು ಹೊರತುಪಡಿಸಿ ಅಣೆಕಟ್ಟುಗಳಿರುವ ಹಾಗೂ ಭೂಕುಸಿತ ಸಂಭವಿಸುವ ಅಪಾಯಕಾರಿ ವಲಯಗಳಲ್ಲಿ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ನಿಷೇಧ ಹೇರಬೇಕು’ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೊಚರೇಕರ ಅವರು ಆಗ್ರಹಿಸಿದ್ದಾರೆ.
ಈ ಸಂಬAಧ ರಾಜ್ಯ ಸರ್ಕಾರ ನೇಮಕ ಮಾಡಿರುವ ನ್ಯಾಯಮೂರ್ತಿ ಡಿ. ಕುನ್ನಾ ಅವರ ನೇತೃತ್ವದ ಪರಿಸರ ಸೂಕ್ಷ್ಮ ಪ್ರದೇಶಗಳ ಅಧ್ಯಯನ ಸಮಿತಿಗೆ ಅವರು ಸುದೀರ್ಘ ಪತ್ರ ಬರೆದಿದ್ದಾರೆ. ಕಸ್ತೂರಿರಂಗನ್ ವರದಿಯ ಆಧಾರದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಜನವಸತಿ ಪ್ರದೇಶಗಳನ್ನೂ ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿಸಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿ ರಾಜ್ಯ ವಿಧಾನಸಭೆಯೂ ನಿರ್ಣಯ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿಪ್ರಾಯ ಸಲ್ಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇತ್ತೀಚೆಗೆ ನ್ಯಾಯಮೂರ್ತಿ ಡಿ. ಕುನ್ನಾ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿದೆ. `ಈ ಸಮಿತಿಗೆ ಸಲ್ಲಿಸಿರುವ ಅಹವಾಲಿನಲ್ಲಿ ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ) ಘೋಷಿಸುವ ಮುನ್ನ ಅಲ್ಲಿನ ರೈತರು, ಅರಣ್ಯವಾಸಿಗಳು, ಬುಡಕಟ್ಟು ಸಮುದಾಯಗಳು ಹಾಗೂ ಪಾರಂಪರಿಕವಾಗಿ ಅರಣ್ಯಾಧಾರಿತ ಜೀವನ ನಡೆಸುತ್ತಿರುವ ಜನರ ಜೀವ, ಜೀವನೋಪಾಯ ಮತ್ತು ಹಕ್ಕುಗಳ ಸಂರಕ್ಷಣೆಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
`ಈ ಹಿಂದೆ ಕೊಯ್ನಾ ಸೇರಿದಂತೆ ವಿವಿಧೆಡೆ ಸಂಭವಿಸಿದ ಅಣೆಕಟ್ಟು ದುರಂತಗಳು ಹಾಗೂ ವಯನಾಡು ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತಗಳಿಂದ ಉಂಟಾದ ಜೀವಹಾನಿ ಮತ್ತು ಪರಿಸರ ನಾಶವನ್ನು ಯೋಜನೆ ರೂಪಿಸುವವರು ಗಂಭೀರವಾಗಿ ಪರಿಗಣಿಸಬೇಕು. ಪಶ್ಚಿಮಘಟ್ಟದ ವಿವಿಧೆಡೆ ಕಂಡುಬರುತ್ತಿರುವ ಭೂಸೀಳುವಿಕೆ ಮತ್ತು ಭೂಕುಸಿತದ ಅಪಾಯದ ನಡುವೆ ಭವಿಷ್ಯದ ಯೋಜನೆಗಳಿಗಾಗಿ ಸುರಂಗ ನಿರ್ಮಾಣಕ್ಕೆ ಸ್ಫೋಟಕಗಳನ್ನು ಬಳಸುವುದು ಅಣೆಕಟ್ಟುಗಳ ಸುರಕ್ಷತೆಗೆ ಧಕ್ಕೆ ತರಬಹುದು ಎಂಬ ವಿಜ್ಞಾನಿಗಳ ಅಭಿಪ್ರಾಯಗಳನ್ನು ನಿರ್ಲಕ್ಷಿಸಬಾರದು’ ಎಂದು ಅವರು ಸಮಿತಿಯ ಗಮನ ಸೆಳೆದಿದ್ದಾರೆ.
`ಈ ಎಲ್ಲ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮಘಟ್ಟದಲ್ಲಿ ಭೌತಿಕ ಸರ್ವೆ ಹಾಗೂ ಅಗತ್ಯ ಅಧ್ಯಯನ ನಡೆಸಬೇಕು. ಅಣೆಕಟ್ಟುಗಳ ಸುರಕ್ಷತೆ ಮತ್ತು ಘಟ್ಟದ ಕೆಳಭಾಗದಲ್ಲಿ ವಾಸಿಸುವ ಜನರ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿರುವ ಬೃಹತ್ ಯೋಜನೆಗಳಿಗೆ ಸಂಪೂರ್ಣ ನಿಷೇಧ ವಿಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. ಅದೇ ರೀತಿ, `2015ರ ಪೂರ್ವದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರು ಸೇರಿದಂತೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಕೋರಿ ಅರ್ಜಿ ಸಲ್ಲಿಸಿರುವವರು ಹಾಗೂ ಕಂದಾಯ ಮತ್ತು ಖಾಸಗಿ ಭೂಮಿಯನ್ನು ಹೊಂದಿರುವ ಸ್ಥಳೀಯರ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗದAತೆ ಕ್ರಮ ಕೈಗೊಳ್ಳಬೇಕು. ಅವರ ಕಾನೂನುಬದ್ಧ ಹಕ್ಕುಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆಯಲ್ಲಿಯೇ ಸ್ಪಷ್ಟವಾಗಿ ದಾಖಲಿಸುವಂತೆ ಅಧ್ಯಯನ ಸಮಿತಿಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಕ್ತ ಸಲಹೆ ಹಾಗೂ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.
ಕಸ್ತೂರಿರಂಗನ್ ಆಯೋಗದ ವರದಿಯಲ್ಲಿ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾದ ರಾಜ್ಯದ ಹಲವು ಪ್ರದೇಶಗಳು ಈಗಾಗಲೇ ರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಸರ್ಕಾರದಿಂದ ಘೋಷಿಸಲ್ಪಟ್ಟಿವೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಿಂದಲೇ ಜನಸಾಮಾನ್ಯರ ಜೀವನೋಪಾಯಕ್ಕೆ ಹಲವು ರೀತಿಯ ತೊಂದರೆಗಳು ಎದುರಾಗುತ್ತಿವೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಕೃಷಿ, ತೋಟಗಾರಿಕೆ, ನೀರಾವರಿ, ಕುಡಿಯುವ ನೀರಿನ ಪೂರೈಕೆ ಹಾಗೂ ರಸ್ತೆ, ಆಸ್ಪತ್ರೆ, ಶಾಲೆ ಮತ್ತು ಕಾಲೇಜುಗಳಂತಹ ಮೂಲಸೌಕರ್ಯಗಳ ನಿರ್ಮಾಣಕ್ಕೂ ಅಡೆತಡೆ ಉಂಟಾಗುವ ಆತಂಕವಿದೆ ಎಂದು ಅವರು ಅಹವಾಲಿನಲ್ಲಿ ಉಲ್ಲೇಖಿಸಿದ್ದಾರೆ.ಹೀಗಾಗಿ ಕೃಷಿ, ತೋಟಗಾರಿಕೆ ಹಾಗೂ ಇತರ ಜೀವನೋಪಾಯ ಚಟುವಟಿಕೆಗಳೊಂದಿಗೆ ಬದುಕು ಕಟ್ಟಿಕೊಂಡಿರುವ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಹೊರಗಿಡಬೇಕು. ಖಾಸಗಿ, ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಪಾರಂಪರಿಕವಾಗಿ ವಾಸಿಸುತ್ತಿರುವ ಜನರ ಹಕ್ಕುಗಳನ್ನು ಕಾನೂನುಬದ್ಧವಾಗಿ ರಕ್ಷಿಸುವ ನಿಟ್ಟಿನಲ್ಲಿ ಅಧಿಸೂಚನೆಯಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.
`ವಿಶೇಷವಾಗಿ ಶರಾವತಿ ನದಿ ಕಣಿವೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಾಗೂ ಅಲ್ಲಿನ ಜಲಾಶಯಗಳ 15 ಕಿ.ಮೀ. ವ್ಯಾಪ್ತಿಯಲ್ಲಿ ಪಂಪ್ ಸ್ಟೋರೇಜ್ ವಿದ್ಯುತ್ ಯೋಜನೆಗಳಿಗಾಗಿ ಯಾವುದೇ ರೀತಿಯ ಸ್ಫೋಟಕಗಳನ್ನು ಬಳಸುವುದನ್ನು ಮತ್ತು ಸುರಂಗಗಳನ್ನು ನಿರ್ಮಿಸುವುದನ್ನು ನಿಷೇಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.