ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ದಿನ ಕಾರವಾರದಲ್ಲಿ ಭಿಕ್ಷೆ ಬೇಡಿದ್ದಾರೆ. ಆ ಭಿಕ್ಷೆಯ ಹಣವನ್ನು ಅವರು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನೀಡಿದ್ದಾರೆ.
ಬಸ್ ಪ್ರಯಾಣ ದರ, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಾದ ಬಗ್ಗೆ ಬಿಜೆಪಿಗರು ಆಕ್ಷೇಪವ್ಯಕ್ತಪಡಿಸಿದ್ದಾರೆ. ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆದಿದ್ದು, ಮೆರವಣಿಗೆಯಲ್ಲಿ ಸಾಗಿದ ಮುಖಂಡರು ಹಾಗೂ ಕಾರ್ಯಕರ್ತರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಭಿಕ್ಷೆ ಸಂಗ್ರಹಿಸುವ ಮೂಲಕ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ವ್ಯಂಗ್ಯವಾಡಿದ ಪ್ರತಿಭಟನಾಕಾರರು ಜನರ ಜೇಬಿಗೆ ಕತ್ತರಿ ಹಾಕುವ ಬೆಲೆ ಏರಿಕೆ ನೀತಿಯನ್ನು ಹಿಂಪಡೆಯುವAತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಜನರಿಂದ ಭಿಕ್ಷೆ ಸಂಗ್ರಹಿಸಿ ನೀಡುತ್ತೇವೆ. ಆ ಹಣದಲ್ಲಾದರೂ ಸರ್ಕಾರ ಆಡಳಿತ ನಡೆಸಲಿ’ ಎಂದು ವ್ಯಂಗ್ಯವಾಡಿದರು. ವಾಲ್ಮೀಕಿ ನಿಗಮದ ಹಗರಣ, ಕೆಪಿಎಸ್ಸಿ ನೇಮಕಾತಿ ಅಕ್ರಮದ ಆರೋಪಗಳು, ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಸಮಸ್ಯೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
`ಹಾಲಿನ ಬೆಲೆ ಹೆಚ್ಚಳದ ಬೆನ್ನಲ್ಲೇ ಮೊಸರು, ಬೆಣ್ಣೆ ಹಾಗೂ ತುಪ್ಪದ ದರವೂ ಏರಿಕೆಯಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಹೆಸರಿನಲ್ಲಿ ಗ್ರಾಹಕರ ಮೇಲೆ ಹೊರೆ ಹಾಕುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು. `ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಹೇಳಿ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ ಸಾರಿಗೆ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಪಕ ಗೌರವಧನ ನೀಡುವುದು ಹಾಗೂ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.
ನ್ಯಾಯವಾದಿ ನಾಗರಾಜ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.