ಕಾರವಾರದ ಕ್ರಿಮ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಕಾನೂನುಬದ್ಧ ಸೌಲಭ್ಯ ಸಿಗದ ಬಗ್ಗೆ ದೂರು ಬಂದಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಲ್ಲಿ ದುಡಿಯುವವರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ ಸೇರಿ ಇನ್ನಿತರ ಸೌಲಭ್ಯ ವಂಚನೆಯಾದ ಬಗ್ಗೆ ಅಧಿಕಾರಿಗಳು ನೌಕರರಲ್ಲಿ ಪ್ರಶ್ನಿಸಿದ್ದಾರೆ.
ಕಾರ್ಮಿಕ ಅಧಿಕಾರಿ ಲತಾ ಸಾತನಹಳ್ಳಿ ಹಾಗೂ ಕಾರ್ಮಿಕ ನಿರೀಕ್ಷಕ ವೆಂಕಟೇಶ್ ಬಾಬು ಅವರು ಕ್ರಿಮ್ಸ್ ನಿರ್ದೇಶಕರ ಸಮ್ಮುಖದಲ್ಲಿ ಈ ವಿಚಾರಣೆ ನಡೆಸಿದ್ದಾರೆ. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ವಿಚಾರಣೆ ವೇಳೆ ಹಾಜರಿದ್ದು, ನೌಕರರಿಗೆ ಆಗುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಹೊರಗುತ್ತಿಗೆ ನೌಕರರಿಗೆ ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸದಿರುವುದು ಗೊತ್ತಾಗಿದೆ. ಕನಿಷ್ಠ ವೇತನ ಪಾವತಿಯಲ್ಲಿ ತಾರತಮ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ಅಂಶಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಜೊತೆಗೆ ನ್ಯೂನತೆಗಳನ್ನು ಸರಿಪಡಿಸುವಂತೆಯೂ ಸೂಚಿಸಿದ್ದಾರೆ. ರಾಷ್ಟ್ರೀಯ ಹಬ್ಬಗಳ ರಜಾದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ನಿಯಮಾನುಸಾರ ರಜೆ ಅಥವಾ ಹೆಚ್ಚುವರಿ ವೇತನ ನೀಡಬೇಕೆಂಬ ಕಾನೂನುಬದ್ಧ ಅಂಶವನ್ನೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳು ವಿಚಾರಣೆ ಮುಗಿಸಿ ಕೊಠಡಿಯಿಂದ ಹೊರಬರುತ್ತಿದ್ದಂತೆ ಕ್ರಿಮ್ಸ್ನ ಡಿ ದರ್ಜೆ ನೌಕರರು, ಮಹಿಳಾ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು ಹಾಗೂ ಅಂಬುಲೆನ್ಸ್ ಚಾಲಕರು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮತ್ತು ಕಾರ್ಮಿಕ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. `ಗುತ್ತಿಗೆದಾರರಿಂದ ತಮಗೆ ನಿರಂತರ ಅನ್ಯಾಯವಾಗುತ್ತಿದೆ. ಕೆಲವರಿಗೆ ಮಾತ್ರ ಕನಿಷ್ಠ ವೇತನ ಸರಿಯಾಗಿ ಪಾವತಿಸಲಾಗುತ್ತಿದ್ದು, ಇನ್ನು ಕೆಲವರಿಗೆ ನಿಗದಿತ ವೇತನ ನೀಡುತ್ತಿಲ್ಲ. ಪಿಎಫ್ ಹಣವನ್ನು ಸಮರ್ಪಕವಾಗಿ ಜಮಾ ಮಾಡುತ್ತಿಲ್ಲ. ಮಹಿಳಾ ಸಿಬ್ಬಂದಿಗಳಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಋತುಚಕ್ರದ ರಜೆಯನ್ನೂ ನೀಡುತ್ತಿಲ್ಲ’ ಎಂದವರು ದೂರಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಮಹಿಳಾ ಆಯೋಗದ ಅಧ್ಯಕ್ಷರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಮ್ಸ್ನ ಮಹಿಳಾ ಸಿಬ್ಬಂದಿ ಹಾಗೂ ಶುಶ್ರೂಷಕಿಯರು ತಮ್ಮ ಮೇಲಿನ ಅನ್ಯಾಯದ ಕುರಿತು ಮಹಿಳಾ ಆಯೋಗದ ಅಧ್ಯಕ್ಷರ ಮುಂದೆ ಯಾವುದೇ ವಿಚಾರ ಪ್ರಸ್ತಾಪಿಸಬಾರದು ಎಂದು ಕ್ರಿಮ್ಸ್ ಆಡಳಿತದ ಕಡೆಯಿಂದ ಬೆದರಿಕೆ ಬಂದ ಬಗ್ಗೆಯೂ ದೂರುಗಳಿವೆ.