ಮಂಗಳೂರಿನಲ್ಲಿ 1.15 ಕೋಟಿ ರೂ ಹವಾಲ ಹಣ ದರೋಡೆಯಾಗಿದ್ದು, ಆ ಪ್ರಕರಣದಲ್ಲಿ ಕಾರವಾರದ ಪೊಲೀಸ್ ಸಿಬ್ಬಂದಿ ಶ್ರೀಶೈಲ್ ಅವರು ಪ್ರಮುಖ ಆರೋಪಿಯಾಗಿದ್ದಾರೆ. ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿಯಾಗಿದ್ದ ಅವರನ್ನು ಸದ್ಯ ಸೇವೆಯಿಂದ ಅಮಾನತು ಮಾಡಲಾಗಿದೆ.
ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ್ ಎಂಬ ಪೊಲೀಸ್ ಪೇದೆಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯಿಂದ ಮಂಗಳೂರಿಗೆ ಹವಾಲ ಹಣ ಸಾಗಣೆಯಾಗುತ್ತಿರುವ ಮಾಹಿತಿ ಶ್ರೀಶೈಲ್ ಅವರಿಗೆ ಗೊತ್ತಾಗಿತ್ತು. ಅಕ್ರಮ ಹಣ ವರ್ಗಾವಣೆ ಆಗುವ ವಿಷಯ ಅರಿತ ಅವರು ಆ ಹವಾಲಾ ಹಣದ ವ್ಯವಹಾರದಲ್ಲಿ ತೊಡಗಿದ್ದ ಸತ್ಯನಾರಾಯಣ ಅವರನ್ನು ಗುರಿಯಾಗಿಸಿಕೊಂಡಿದ್ದರು. ಅವರನ್ನು ಅಪಹರಿಸಿ ಅವರ ಬಳಿಯಿದ್ದ ಸುಮಾರು 1.15 ಕೋಟಿ ರೂ. ಹಣವನ್ನು ದೋಚಿದ್ದರು. ಆ ಹಣ ವರ್ಗಾವಣೆಯೂ ಅಕ್ರಮವಾಗಿದ್ದರಿಂದ ಆ ಬಗ್ಗೆ ಸತ್ಯನಾರಾಯಣ ಅವರು ದೂರು ನೀಡುವುದಿಲ್ಲ ಎಂದು ಆರೋಪಿತರು ಭಾವಿಸಿದ್ದರು.
ಆದರೆ, ಸತ್ಯನಾರಾಯಣ ಅವರು ದೂರು ನೀಡಿದ್ದು, ತನಿಖೆ ಆರಂಭಿಸಿದ ಮಂಗಳೂರು ಪೊಲೀಸರಿಗೆ ಈ ಕೃತ್ಯದ ಹಿಂದೆ ಕಾರವಾರದ ಪೊಲೀಸ್ ಪೇದೆಯೊಬ್ಬರ ಸಂಪರ್ಕವಿರುವ ಸುಳಿವು ಸಿಕ್ಕಿತು. ತನಿಖೆಯಲ್ಲಿ ಶ್ರೀಶೈಲ್ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಕಾರವಾರದ ಯುವಕರ ಮೂಲಕ ಅಪಹರಣಕ್ಕೆ ಸಂಚು ರೂಪಿಸಿರುವುದು ಗೊತ್ತಾಯಿತು. ಕಾರವಾರ ತಾಲೂಕಿನ ಗಣೇಶ ಕೋಳಂಕರ್ ಎಂಬ ಯುವಕನನ್ನು ಈ ಕೃತ್ಯಕ್ಕೆ ಬಳಸಿಕೊಂಡಿರುವುದಾಗಿಯೂ ತನಿಖೆಯಲ್ಲಿ ತಿಳಿದುಬಂದಿದೆ.
ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪೊಲೀಸ್ ಪೇದೆ ಶ್ರೀಶೈಲ್ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಗಣೇಶ ಕೋಳಂಕರ್ ಅವರು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಇನ್ನೂ ಹಣದ ಸಾಗಣೆಯ ಮಾಹಿತಿ ಪೊಲೀಸ್ ಪೇದೆಗೆ ಸಿಕ್ಕಿದ್ದು ಹೇಗೆ? ಇನ್ನು ಎಷ್ಟು ಜನ ಇದರಲ್ಲಿ ಭಾಗಿ ಆಗಿದ್ದಾರೆ? ಎಂಬುದು ತನಿಖೆ ನಡೆಯುತ್ತಿದೆ.