ಕಡಕೇರಿಯ ಗಣಪತಿ ಮಡಿವಾಳ ಹಾಗೂ ಅವರ ಭಾವ ಸದಾನಂದ ಮಡಿವಾಳ ಅವರು ಚಲಿಸುತ್ತಿದ್ದ ಬೈಕಿಗೆ ನಾಯಿ ಅಡ್ಡ ಬಂದಿದ್ದು, ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಗಣಪತಿ ಮಡಿವಾಳ ಅವರು ಸಾವನಪ್ಪಿದ್ದಾರೆ. ಶಿರಸಿಯ ಟಿಎಸ್ಎಸ್ ಹಾಗೂ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಿದರೂ ಗಣಪತಿ ಮಡಿವಾಳ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ.
ನವೆಂಬರ್ 5ರಂದು ಕಡಕೇರಿಯ ಗಣಪತಿ ಕನ್ನಾ ಮಡಿವಾಳ ಅವರು ಬನವಾಸಿಗೆ ಹೋಗಲು ನಿರ್ಧರಿಸಿದ್ದರು. ಆ ದಿನ ಸಂಜೆ ಚಂದ್ರಗುತ್ತಿ ಬನವಾಸಿ ರಸ್ತೆಯಲ್ಲಿ ಅವರು ಬೈಕ್ ಓಡಿಸುತ್ತಿದ್ದರು. ಆ ಬೈಕಿನಲ್ಲಿ ಅವರ ಭಾವ ಸದಾನಂದ ನಾರಾಯಣ ಮಡಿವಾಳ ಅವರು ಇದ್ದರು. 63 ವರ್ಷದ ಗಣಪತಿ ಮಡಿವಾಳ ಹಾಗೂ 58 ವರ್ಷದ ಸದಾನಂದ ಮಡಿವಾಳ ಅವರು ಸಂಚರಿಸುತ್ತಿದ್ದ ಬೈಕಿಗೆ ಮೊಗಳ್ಳಿ ಬಳಿ ನಾಯಿಯೊಂದು ಅಡ್ಡ ಬಂದಿತು.
ಆ ಬೈಕು ನಾಯಿಗೆ ಡಿಕ್ಕಿ ಹೊಡೆದು ರಸ್ತೆ ಅಂಚಿಗೆ ಬಿದ್ದಿತು. ಪರಿಣಾಮ ಗಣಪತಿ ಮಡಿವಾಳ ಅವರು ನೆಲಕ್ಕೆ ಬಿದ್ದು, ಮುಖಕ್ಕೆ ಗಾಯ ಮಾಡಿಕೊಂಡರು. ಪ್ರಜ್ಞೆ ತಪ್ಪಿ ಬಿದ್ದ ಗಣಪತಿ ಮಡಿವಾಳ ಅವರನ್ನು ಬನವಾಸಿ ಆಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿರಸಿಯ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ರಕ್ತಸ್ರಾವ ಹೆಚ್ಚಿರುವುದರಿಂದ ಹುಬ್ಬಳ್ಳಿಗೆ ಕರೆದೊಯ್ಯುವಂತೆ ವೈದ್ಯರು ಹೇಳಿದ್ದು, ಗಣಪತಿ ಮಡಿವಾಳ ಅವರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ನವೆಂಬರ್ 10ರಂದು ಅವರು ಸಾವನಪ್ಪಿದರು. ಅಪಘಾತದಲ್ಲಿ ಗಾಯಗೊಂಡಿದ್ದ ಸದಾನಂದ ಮಡಿವಾಳ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಗಣಪತಿ ಮಡಿವಾಳ ಅವರ ಸಾವಿನ ಬಗ್ಗೆ ಅವರ ಮಗ ಚಂದನ ಮಡಿವಾಳ ಅವರು ಮಾಹಿತಿ ನೀಡಿದ್ದು, ಅದರನ್ವಯ ಸದಾನಂದ ಮಡಿವಾಳ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದರು.