ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಭಾರತೀಯ ನೌಕಾಪಡೆ ಸಜ್ಜಾಗಿದೆ. ಈ ಹಿನ್ನಲೆ ‘ಸೀ ವಿಜಿಲ್ 2026’ ಎಂಬ ಹೆಸರಿನ ಅಡಿ ಸಮರಾಭ್ಯಾಸ ನಡೆಯುತ್ತಿದೆ.
ಭಾರತೀಯ ಕರಾವಳಿ ರಕ್ಷಣಾ ಪಡೆ, ಕಸ್ಟಮ್ಸ್ ಇಲಾಖೆ, ಕರಾವಳಿ ಪೊಲೀಸ್, ರಾಜ್ಯ ಆಡಳಿತ, ಬಂದರು ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಸಮರಾಭ್ಯಾಸ ನಡೆಯಲಿದೆ. 2018ರಲ್ಲಿ ಆರಂಭಗೊoಡಿರುವ ಈ ದ್ವೈವಾರ್ಷಿಕ ರಾಷ್ಟ್ರೀಯ ಮಟ್ಟದ ಅಭ್ಯಾಸದ ಐದನೇ ಆವೃತ್ತಿ ಇದಾಗಿದ್ದು, ದೇಶದ ಸಮಗ್ರ ಕಡಲ ಭದ್ರತಾ ವ್ಯವಸ್ಥೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಿದೆ. ಕರಾವಳಿಯಲ್ಲಿ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದು ಹಾಗೂ ವಿವಿಧ ಭದ್ರತಾ ಸಂಸ್ಥೆಗಳ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರೀಕ್ಷಿಸುವುದು ಈ ಅಭ್ಯಾಸದ ಪ್ರಮುಖ ಉದ್ದೇಶವಾಗಿದೆ.
ಸಮುದ್ರ ಮಾರ್ಗದ ಮೂಲಕ ಎದುರಾಗಬಹುದಾದ ಅನಿರೀಕ್ಷಿತ ಸವಾಲುಗಳು ಹಾಗೂ ಭದ್ರತಾ ಬೆದರಿಕೆಗಳನ್ನು ಎದುರಿಸಲು ವಿವಿಧ ಇಲಾಖೆಗಳು ಎಷ್ಟರ ಮಟ್ಟಿಗೆ ಸನ್ನದ್ಧವಾಗಿವೆ ಎಂಬುದನ್ನು ಈ ಅಭ್ಯಾಸದ ಮೂಲಕ ಪರಿಶೀಲಿಸಲಾಗುತ್ತದೆ. ಇಲಾಖೆಗಳ ನಡುವಿನ ಸಂವಹನ ವ್ಯವಸ್ಥೆ, ತುರ್ತು ಪ್ರತಿಕ್ರಿಯೆ, ಪರಸ್ಪರ ಸಹಕಾರ ಮತ್ತು ಈಗಾಗಲೇ ಜಾರಿಯಲ್ಲಿರುವ ಕಾರ್ಯಾಚರಣಾ ವಿಧಾನಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದಕ್ಕೂ ಇದು ವೇದಿಕೆಯಾಗಲಿದೆ. ಈ ಬಾರಿಯ ಅಭ್ಯಾಸದಲ್ಲಿ ಕರಾವಳಿ ಭಾಗದ ಮೀನುಗಾರ ಸಮುದಾಯದ ಪಾಲ್ಗೊಳ್ಳುವಿಕೆಗೂ ವಿಶೇಷ ಮಹತ್ವ ನೀಡಲಾಗಿದೆ. ಸಮುದ್ರದಲ್ಲಿ ನಿರಂತರವಾಗಿ ಸಂಚರಿಸುವ ಮೀನುಗಾರರು ಕರಾವಳಿ ಭದ್ರತೆಯ ಪ್ರಮುಖ ಕೊಂಡಿಯಾಗಿರುವುದರಿAದ ಅವರಲ್ಲಿ ಜಾಗೃತಿ ಮೂಡಿಸುವುದು ಮತ್ತು ಭದ್ರತಾ ಸಂಸ್ಥೆಗಳೊAದಿಗೆ ಉತ್ತಮ ಸಂವಹನ ಬೆಳೆಸುವುದು ಅಭ್ಯಾಸದ ಪ್ರಮುಖ ಆಶಯವಾಗಿದೆ. ಮೀನುಗಾರರ ಸಹಕಾರದೊಂದಿಗೆ ಕರಾವಳಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶವೂ ಇದೆ.
ಕರ್ನಾಟಕ ನೌಕಾ ವಲಯವು ರಾಜ್ಯದ ಎಲ್ಲ ಕಡಲ ಮತ್ತು ಕರಾವಳಿ ಭದ್ರತಾ ಸಂಸ್ಥೆಗಳೊ0ದಿಗೆ ನಿಕಟ ಸಮನ್ವಯ ಸಾಧಿಸಿ ಈ ಅಭ್ಯಾಸದಲ್ಲಿ ಕಾರ್ಯನಿರ್ವಹಿಸಲಿದೆ. ಕರಾವಳಿ ತೀರದ ಸುರಕ್ಷತೆ, ಕಡಲ ಆಸ್ತಿಗಳ ರಕ್ಷಣೆ ಹಾಗೂ ಕರಾವಳಿ ಭಾಗದ ಜನರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಮರಾಭ್ಯಾಸ ಮಹತ್ವದ ಪಾತ್ರ ವಹಿಸಲಿದೆ.