ಆಲಳ್ಳಿಯ ಕಮಲವ್ವ ಆಡೂರು ಅವರನ್ನು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದ ಮಾರುತಿ ಮೂಡಸಾಲಿ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸವಣೂರಿನಲ್ಲಿ ಅಡಗಿದ್ದ ಕೊಲೆಗಾರನನ್ನು ಪೊಲೀಸರು ಬಂಧಿಸಿದ್ದಾರೆ.
ಮುoಡಗೋಡು ಆಲಳ್ಳಿಯ ಕಮಲವ್ವ ತಿರಕಪ್ಪ ಆಡೂರ ಅವರು 75ನೇ ವಯಸ್ಸಿನಲ್ಲಿ ಕೊಲೆಯಾಗಿದ್ದರು. ಎರಡು ತಿಂಗಳಿನಿAದ ಕಮಲವ್ವ ಅವರ ಮನೆಗೆ ಪದೇ ಪದೇ ಭೇಟಿ ನೀಡಿ ಆತ್ಮೀಯರಾಗಿದ್ದ ಅದೇ ಊರಿನ ಮಾರುತಿ ಅಡಿವೆಪ್ಪ ಮುಡಸಾಲಿ ಈ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ನಡೆದಿರುವುದು ಬೆಳಕಿಗೆ ಬಂದ ಹಿಂದಿನ ದಿನವೂ ಮಾರುತಿ ಮೂಡಸಾಲಿ ಅವರು ಅಜ್ಜಿ ಮನೆಗೆ ಬಂದಿದ್ದು, ಅದಾದ ನಂತರ ಕಣ್ಮರೆಯಾಗಿದ್ದರು.
ತಾಯಿ ಸಾವಿನ ಬಗ್ಗೆ ರಾಘವೇಂದ್ರ ತಿರಕಪ್ಪ ಆಡೂರ ಅವರು ದೂರು ನೀಡಿದ್ದರು. ವಿಶೇಷ ತಂಡ ರಚಿಸಿದ ಪೊಲೀಸರು ಸವಣೂರಿನಲ್ಲಿ ಅಡಗಿದ್ದ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಆರೋಪಿ ಮಾರುತಿ ಮೂಡಸಾಲಿ ಅವರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸಿಸಿ ಕ್ಯಾಮರಾ ಹಾಗೂ ಇನ್ನಿತರ ಸಾಕ್ಷಿ ಸಿಗದಿದ್ದರೂ ಪೊಲೀಸರು ಆರೋಪಿಯನ್ನು ಹುಡುಕಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಕಾರವಾರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಹಾಗೂ ಶಿರಸಿ ಉಪ ವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ ಅವರ ಜೊತೆ ಮುಂಡಗೋಡಿನ ಪಿಐ ರಮೇಶ್ ಹಾನಾಪುರ, ಪಿಐ ಮಂಜುನಾಥ ಗೌಡರ, ರವೀಂದ್ರ ಬಿರಾದಾರ, ನಿಂಗರಾಜ ಕರಡಿಗುಡ್ಡಿ ಅವರು ಈ ಕಾರ್ಯಾಚರಣೆ ನಡೆಸಿದ್ದಾರೆ.