ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಪ್ರಜಾ ಸೇವೆ ಆಂದೋಲನ ನಡೆಯುತ್ತಿದ್ದು, ಸಾವಿರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯುತ್ತಿದೆ. ರಾಜ್ಯದಲ್ಲಿ ಈವರೆಗೆ 1,08,057 ಅರ್ಜಿ ಸ್ವೀಕಾರ ನಡೆದಿದ್ದು, ಅದರಲ್ಲಿ 99,142 ಅರ್ಜಿಯಲ್ಲಿನ ಸಮಸ್ಯೆಗಳು ಬಗೆಹರಿದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 4,879 ಅರ್ಜಿ ಸ್ವೀಕಾರವಾಗಿದ್ದು, ಅದರಲ್ಲಿ 4,694 ಅರ್ಜಿಗಳಲ್ಲಿದ್ದ ವಿಷಯ ಬಗೆಹರಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷಣ ಸವದಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ನಿಜವಾದ ಮಾಲೀಕರಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವರ ಸೇವಕರಾಗಿ ಕಾರ್ಯನಿರ್ವಹಿಸಬೇಕು’ ಎಂದು ಸಹ ಅವರು ಸೂಚಿಸಿದ್ದಾರೆ. `15 ದಿನಗಳ ಒಳಗೆ ಸಮಸ್ಯೆ ಬಗೆಹರಿಸಬೇಕು’ ಎಂದವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. `ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ಪ್ರಜಾ ಸೇವೆಯ ಮುಖ್ಯ ಉದ್ದೇಶ’ ಎಂದವರು ಹೇಳಿದ್ದಾರೆ.
`ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಒಂದು ವಾರದಿಂದ 10 ದಿನಗಳ ಒಳಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಗರಿಷ್ಠ 15 ದಿನಗಳೊಳಗೆ ಪರಿಹಾರ ಒದಗಿಸಬೇಕು. ಪರಿಹಾರ ನೀಡಲು ಸಾಧ್ಯವಾಗದಿದ್ದಲ್ಲಿ ಅರ್ಜಿದಾರರಿಗೆ ಸ್ಪಷ್ಟ ಹಾಗೂ ನಿಖರವಾದ ಉತ್ತರ ನೀಡಬೇಕು’ ಎಂದು ಅವರು ಅಧಿಕಾರಿಗಳಿಗೆ ಹೇಳಿದ್ದಾರೆ. `ಬಾಕಿ ಉಳಿದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಗುರಿಗಳ ಕುರಿತು ಚರ್ಚಿಸಲು ನವೆಂಬರ್ 19 ರಂದು ತ್ರೈ ಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ.
`ಗ್ರಾಮೀಣ ಬದುಕಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್, ಶಾಲೆ-ಕಾಲೇಜು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಕೃಷಿ ಮತ್ತು ತೋಟಗಾರಿಕೆಗೆ ಅಗತ್ಯ ಸೌಲಭ್ಯಗಳಿಂದ ವಂಚಿತರಾದವರಿಗೆ ಒಂದೇ ಸೂರಿನಡಿ ಪರಿಹಾರ ಕಲ್ಪಿಸಲಾಗುತ್ತದೆ’ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ.