ಅಖಿಲ ಭಾರತ ಕಿಸಾನ್ ಕೌನ್ಸಿಲ್ (ಎಐಕೆಸಿ) ಸದಸ್ಯರಾಗಿ ಆಯ್ಕೆಯಾಗಿ ಅಂಕೋಲಾದ ಶಾಂತರಾಮ ನಾಯಕ ಅವರು ಆಯ್ಕೆಯಾಗಿದ್ದಾರೆ. ತೆಲಂಗಾಣದ ನಲ್ಗೋಡಾದಲ್ಲಿ ನಡೆದ ಸಮ್ಮೇಳನದಲ್ಲಿ ಅವರ ಆಯ್ಕೆಯನ್ನು ಅಧಿಕೃತಗೊಳಿಸಲಾಗಿದೆ.
ನವೆಂಬರ್ 15ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಕಿಸಾನ್ ಸಭಾದ 36 ನೇ ಅಖಿಲ ಭಾರತ ಸಮ್ಮೇಳನ ನಡೆದಿದೆ. ಅದರ ಪ್ರತಿನಿಧಿಯಾಗಿಯೂ ಅಂಕೋಲಾದ ಶಾಂತರಾಮ ನಾಯಕ ಅವರು ಭಾಗವಹಿಸಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಅವರನ್ನು ಈ ವೇಳೆಯಲ್ಲಿಯೇ ಅಖಿಲ ಭಾರತ ಕಿಸಾನ್ ಕೌನ್ಸಿಲ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಅನೇಕ ಸಮಸ್ಯೆಗಳಿಗೆ ಹೋರಾಟದ ಮೂಲಕ ಧ್ವನಿಯಾಗಿರುವ ಶಾಂತರಾಮ ನಾಯಕ ಅವರಿಗೆ ಸದ್ಯ ರಾಷ್ಟ್ರ ಮಟ್ಟದ ರೈತ ಸಮಿತಿಯಲ್ಲಿ ಸ್ಥಾನ ಸಿಕ್ಕಿದ್ದು, ಇದಕ್ಕಾಗಿ ವಿವಿಧ ಸಂಘಟನೆಯವರು ಹರ್ಷವ್ಯಕ್ತಪಡಿಸಿದ್ದಾರೆ.
`ಅರಣ್ಯ ಅತಿಕ್ರಮಣ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಶಾಂತರಾಮ ನಾಯಕ ಅವರು ಹೋರಾಟ ನಡೆಸಿದ್ದಾರೆ. ರೈತ ಪರ ನಿಲುವಿನ ಅವರಿಗೆ ಉನ್ನತ ಹುದ್ದೆ ಸಿಕ್ಕಿರುವುದು ಸಂಘಟನೆಗೂ ಶಕ್ತಿ ಬಂದಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಅವರು ಹೇಳಿದ್ದಾರೆ. `ಅಂಕೋಲಾದ ಶಾಂತರಾಮ ನಾಯಕ ಅವರಿಗೆ ಅಖಿಲ ಭಾರತ ಕಿಸಾನ್ ಕೌನ್ಸಿಲ್ ಸದಸ್ಯತ್ವ ಸಿಕ್ಕಿರುವುದರಿಂದ ಇಲ್ಲಿನ ಸಮಸ್ಯೆಗಳ ಕುರಿತು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಧ್ವನಿಯಾಗಲು ಸಹಕಾರಿಯಾಗಲಿದೆ’ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ತಿಲಕ್ ಗೌಡ ಅವರು ಹೇಳಿದ್ದಾರೆ. `ಎಐಕೆಎಸ್ ಸ್ಥಾಪನೆಯಾಗಿ 90 ವರ್ಷ ಪೂರ್ಣವಾಗುತ್ತಿರುವ ಸಂದರ್ಭದಲ್ಲಿ ತೆಲಂಗಾಣ ಸಶಸ್ತ್ರ ರೈತ ಹೋರಾಟದ ಕೇಂದ್ರವಾಗಿದ್ದ ನಲ್ಗೊಂಡದಲ್ಲಿ ಅಖಿಲ ಭಾರತ ರೈತ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಅದರಲ್ಲಿ ನಮ್ಮವರೇ ಆದ ಶಾಂತರಾಮ ನಾಯಕ ಅವರಿಗೆ ಮನ್ನಣೆ ಸಿಕ್ಕಿರುವುದು ಖುಷಿಯ ವಿಚಾರ’ ಎಂದು ಜಿಲ್ಲಾ ಕಾರ್ಮಿಕ ಮುಖಂಡರಾದ ಯಮುನಾ ಗಾಂವ್ಕರ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ವಿರೇಶ ರಾಠೋಡ ಅವರು ಹೇಳಿದ್ದಾರೆ..
`ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿರುವ ದೋಷಗಳ ಬಗ್ಗೆ, ಮುಕ್ತ ವ್ಯಾಪಾರ ಒಪ್ಪಂದಿAದ ಉಂಟಾಗುವ ತೊಂದರೆಗಳ ಬಗ್ಗೆ, ಕಸ್ತೂರಿ ರಂಗನ್ ವರದಿ ಜಾರಿಯ ಪರಿಣಾಮ, ಬೆಂಬಲ ಬೆಲೆ, ನವ ಉದಾರೀಕರಣ ನೀತಿಗಳಿಂದಾಗಿ ರೈತರ ಮೇಲೆ ಉಂಟಾಗುವ ದುಷ್ಪರಿಣಾಮ, ಮನುಷ್ಯ ಪ್ರಾಣಿ ಸಂಘರ್ಷ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಹೋರಾಟದ ನಿರ್ಣಯಗಳನ್ನು ಸಮ್ಮೇಳನ ತೆಗೆದುಕೊಂಡಿದೆ’ ಎಂದು ಶಾಂತರಾಮ ನಾಯಕ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.