ಕಷ್ಟ ಪಟ್ಟು ದುಡಿದ ಹಣವನ್ನು ರೈತರು ಹೀಪನಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಹೂಡಿಕೆ ಮಾಡಿದ್ದು, ಸೊಸೈಟಿ ಅಧ್ಯಕ್ಷರಾಗಿದ್ದ ಗೋಪಾಲ ಹೆಗಡೆ ಹಾಗೂ ಸಿಇಓ ರಾಘವೇಂದ್ರ ಭಟ್ಟ ಸೇರಿ ಅದನ್ನು ಕಬಳಿಸಿದ್ದಾರೆ. ಈ ದುಡ್ಡು ಹೊಡೆಯುವ ಯೋಜನೆಯಲ್ಲಿ ಸೊಸೈಟಿಯ ಆಡಳಿತ ಮಂಡಳಿಯಲ್ಲಿದ್ದ ಕೃಷ್ಣ ಹೆಗಡೆ, ಶಾಂತರಾಮ ಹೆಗಡೆ ಹಾಗೂ ಈಶ್ವರ ದಾಮೋದರ ನಾಯ್ಕ ಅವರು ಪಾಲುಪಡೆದಿದ್ದು, ಅವರೆಲ್ಲರೂ ಪಾಲು ಪಡೆದಿದ್ದಾರೆ. ಜೊತೆಗೆ ಸೊಸೈಟಿ ಸಿಬ್ಬಂದಿಯಾಗಿದ್ದ ವಿನಯ ಹೆಗಡೆ, ರಾಘವೇಂದ್ರ ಹೆಗಡೆ, ಶ್ರೀಪಾದ ಹೆಗಡೆ ಅವರು ಜನರ ದುಡ್ಡು ಜೇಬಿಗಿಳಿಸಿದ್ದಾರೆ.
ಹೀಪನಳ್ಳಿಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸದ್ಯ ದಿನೇಶ ಹೆಗಡೆ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. 2014ರಿಂದ 24ರವರೆಗೆ ಈ ಸೊಸೈಟಿಯಲ್ಲಿ ಅವ್ಯವಹಾರ ನಡೆದಿದನ್ನು ಅವರು ಪತ್ತೆ ಮಾಡಿದ್ದಾರೆ. ಆ ಅವಧಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರಾಘವೇಂದ್ರ ಭಟ್ಟ ಅವರು ಈ ಹಿಂದಿನ ಕ್ಲರ್ಕ್ ಹಾಗೂ ಪ್ರಭಾರಿ ಸಿಇಓ ಶರತ್ ಲಕ್ಷ್ಮಿನಾರಾಯಣ ಹೆಗಡೆ, ಕಾನಳ್ಳಿಯ ಹಿಂದಿನ ಕ್ಲರ್ಕ್ ವಿನಯ ಮಹಾಬಳೇಶ್ವರ ಹೆಗಡೆ, ಹೀಪನಳ್ಳಿಯ ಹಿಂದಿನ ಲೆಕ್ಕಿಗ ರಾಘವೇಂದ್ರ ಮಂಜುನಾಥ ಹೆಗಡೆ, ಮೆಣಸಿಕೇರಿಯ ಹಿಂದಿನ ದಿನಗೂಲಿ ನೌಕರ ಶ್ರೀಪಾದ ನಾರಾಯಣ ಹೆಗಡೆ, ಹಿಂದಿನ ಆಡಳಿತ ಮಂಡಳಿ ಸದಸ್ಯರಾದ ಕೃಷ್ಣ ಹೆಗಡೆ ಮತ್ತು ಶಾಂತಾರಾಮ ಹೆಗಡೆ ಹಾಗೂ 2023ರ ಆಡಳಿತ ಮಂಡಳಿ ನಿರ್ದೇಶಕ ಈಶ್ವರ ದಾಮೋದರ ನಾಯ್ಕ ಅವರ ವಿರುದ್ಧ ದೂರಿದ್ದಾರೆ.
ಜೊತೆಗೆ ಸೊಸೈಟಿಯಲ್ಲಿ ಅಧ್ಯಕ್ಷರಾಗಿದ್ದ ಗೋಪಾಲ ರಾಮಚಂದ್ರ ಹೆಗಡೆ ಮೆಣಸಿಕೇರಿ ಅವರು ಸಹ ಅವ್ಯವಹಾರ ಮಾಡಿದ ಬಗ್ಗೆ ವಿವರಿಸಿದ್ದಾರೆ. ಈ ಎಲ್ಲರೂ ಸೇರಿ 15.59 ಕೋಟಿ ರೂ ಅವ್ಯವಹಾರ ಮಾಡಿದ್ದು, ಹಣ ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ದಿನೇಶ ಹೆಗಡೆ ಅವರು ಹೋರಾಟ ಶುರು ಮಾಡಿದ್ದಾರೆ. ಅಧಿಕಾರ ದುರುಪಯೋಗ, ಹಣಕಾಸಿನ ಅವ್ಯವಹಾರ ನಡೆಸಿದ ಆರೋಪಿತರು ಸಾರ್ವಜನಿಕರ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಬಗ್ಗೆ ಅವರು ಲಿಖಿತವಾಗಿ ಪೊಲೀಸ್ ಹೇಳಿಕೆ ನೀಡಿದ್ದಾರೆ. ಈ ಅವ್ಯವಹಾರದ ಕುರಿತು ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಆ ವರದಿಯನ್ನು ಸೊಸೈಟಿಯ ನೂತನ ಆಡಳಿತ ಮಂಡಳಿ ಪರಿಶೀಲನೆ ನಡೆಸಿದಾಗ ಅವ್ಯವಹಾರ ದೃಢವಾಗಿದೆ.