ಕಾರವಾರದಲ್ಲಿ ನಡೆದ ದಿಶಾ ಸಭೆಯಲ್ಲಿ ವಂದೇ ಮಾತರಂ ಹಾಡಲಾಗಿದ್ದು, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗೀತೆ ಹಾಡಲು ತಡವರಿಸಿದ್ದಾರೆ. ಮೂರನೇ ಚರಣ ಹಾಡುವ ವೇಳೆ ಅವರು ದಾಟಿ ತಪ್ಪಿದ್ದಾರೆ.
ಬುಧವಾರ ಕಾರವಾರ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ದೀಶಾ ಸಭೆ ಆಯೋಜಿಸಲಾಗಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ವಂದೇ ಮಾತರಂ ಗೀತೆ ಹಾಡಲು ಸೂಚಿಸಲಾಗಿದ್ದು, ಸಂಸದರ ಜೊತೆ ದೀಶಾ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಎದ್ದು ನಿಂತರು. ಎಲ್ಲರೂ ಸೇರಿ ವಂದೇ ಮಾತರಂ ಹಾಡಲು ಶುರು ಮಾಡಿದ್ದು, ಮೂರನೇ ಚರಣ ಹೇಳುವಾಗ ಕೆಲ ಅಧಿಕಾರಿಗಳು ಮೌನವಾದರು. ದೀಶಾ ಸಮಿತಿ ಸದಸ್ಯರು ಹಾಡು ಮುಂದುವರೆಸಿದರು. ಈ ವೇಳೆ ಗೊಂದಲಕ್ಕೀಡಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಾಡು ಮುಂದುವರೆಸದೇ ತಡವರಿಸಿದರು.
ಇದಾದ ನಂತರ ಸಭೆಯಲ್ಲಿ ಮಾತನಾಡಿದ ಸಂಸದರು `ವಂದೇ ಮಾತರಂ ಹಾಡಿನ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸೂಚನೆ ಬೇರೆ ಬೇರೆ ರೀತಿಯಿದೆ. ಆದರೆ, ಎಲ್ಲಾ ಅಧಿಕಾರಿಗಳು ಕೇಂದ್ರ ಸರ್ಕಾರದ ಸೂಚನೆ ಪ್ರಕಾರ ಸಭೆಗಳಲ್ಲಿ ಪೂರ್ತಿ ಹಾಡನ್ನು ಹಾಡಬೇಕು’ ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರ ಜೊತೆಯೂ ಈ ಬಗ್ಗೆ ಚರ್ಚೆ ನಡೆಸಿದ ಸಂಸದರು `ನನ್ನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ವಂದೇ ಮಾತರಂ ಪೂರ್ತಿ ಹಾಡಬೇಕು’ ಎಂದು ಸೂಚಿಸಿದರು.
`ಈ ಕುರಿತು ರಾಜ್ಯ ಸರ್ಕಾರಕ್ಕೆ ಸಹ ನಾನು ನಿರ್ದೇಶನ ಕೊಡುವೆ. ಮುಖ್ಯಮಂತ್ರಿ ಹಾಗೂ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ರವಾನಿಸುವೆ. ವಂದೇ ಭಾರತಂ ಶಕ್ತಿ ಅಘಾದವಾಗಿದ್ದು, ನಾನು ಸಂಸದನಾಗಿರುವವರೆಗೂ ಅದನ್ನು ಸಭೆಯಲ್ಲಿ ಪೂರ್ತಿ ಹಾಡಬೇಕು’ ಎಂದು ಸೂಚಿಸಿದರು. ಈ ಸಭೆಯಲ್ಲಿ ವಂದೇ ಮಾತರಂ ಮೂರು ಚರಣ ಹಾಡಿದ ನಂತರ ಕ್ಯಾಸೇಟ್ ಹಾಕಿ ನಾಡಗೀತೆ ಪ್ರಸಾರ ಮಾಡಲಾಗಿದ್ದು, ಅದಕ್ಕೆ ಎಲ್ಲರೂ ಧ್ವನಿಗೂಡಿಸಿದರು.