ಕಂದಾಯ ಇಲಾಖೆ ಸೇರಿ ಕೋಟಿ ರೂ ಸಂಪಾದಿಸಿದ್ದ ಮುಂಡಗೋಡಿನ ಕಂದಾಯ ನಿರೀಕ್ಷಕ ಬಸವರಾಜ ಬಿಸ್ನಾಳ್ ಅವರು 15 ಸಾವಿರ ರೂಪಾಯಿಗಾಗಿ ರೈತರಿಗೆ ಕಾಡಿಸಿದ್ದಾರೆ. ಇದರಿಂದ ಸಿಟ್ಟಾದ ರೈತ ನಾರಾಯಣ ಅವರು ಹಣ ಕೊಟ್ಟು ಲೋಕಾಯುಕ್ತರಿಗೆ ಹಿಡಿಸಿದ್ದಾರೆ.
ಮುಂಡಗೋಡು ತಹಶೀಲ್ದಾರ್ ಕಚೇರಿಯಲ್ಲಿ ಬಸವರಾಜ ಬಿಸ್ನಾಳ್ ಅವರು ಕಂದಾಯ ನಿರೀಕ್ಷಕರಾಗಿದ್ದರು. ಸಣ್ಣ-ಪುಟ್ಟ ಕೆಲಸಗಳಿಗೂ ಅವರು ಜನರನ್ನು ಕಾಡಿಸಿ ಹಣ ಪೀಕುತ್ತಿದ್ದರು. ಕೋಟಿ ರೂ ಸಂಪಾದಿಸಿದರೂ ಅವರ ಹಣದ ದಾಹ ತೀರಿರಲಿಲ್ಲ. ಬಡವರು, ರೈತರು ಕೆಲಸಕ್ಕಾಗಿ ಬಂದರೆ ಅವರನ್ನು ಅತ್ಯಂತ ಕೀಳರಿಮೆಯಿಂದ ನೋಡುತ್ತಿದ್ದರು. ಕಾಸು ಕೊಟ್ಟವರಿಗೆ ಮಾತ್ರ ಬಹುಬೇಗ ಕೆಲಸ ಮಾಡಿಕೊಡುತ್ತಿದ್ದರು.
ಮುಂಡಗೋಡಿನ ನಾರಾಯಣ ಅರೆಜೋಗಿ ಅವರು ತಮ್ಮ ಭೂಮಿಯಲ್ಲಿ ಫಾರ್ಮ ಹೌಸ್ ಕಟ್ಟಿದ್ದರು. ಫಾರ್ಮ ಹೌಸ್ ಪರವಾನಿಗೆಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಪರವಾನಿಗೆ ಕೆಲಸ ಮಾತ್ರ ಆಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಆ ಫೈಲುಗಳು ಕಂದಾಯ ನಿರೀಕ್ಷಕ ಬಸವರಾಜ ಬಿಸ್ನಾಳ್ ಅವರ ಬಳಿ ಬಾಕಿಯಿದ್ದಿದ್ದು ಗೊತ್ತಾಯಿತು. ಅವರನ್ನು ವಿಚಾರಿಸಿದಾಗ ಹಣಕ್ಕಾಗಿ ಕಾಡಿಸಲು ಶುರು ಮಾಡಿದ್ದರು. ಸರ್ಕಾರಿ ಕೆಲಸ ಮಾಡಿಕೊಡಲು ಹಣ ಕೇಳಿದ ಭ್ರಷ್ಟ ಅಧಿಕಾರಿಗೆ ಬುದ್ದಿ ಕಲಿಸಲು ನಾರಾಯಣ ಅರೆಜೋಗಿ ಅವರು ಮುಂದಾದರು.
ಹಣ ಕೇಳಿದ ದಾಖಲೆಗಳ ಜೊತೆ ನಾರಾಯಣ ಅರೆಜೋಗಿ ಅವರು ಕಾರವಾರಕ್ಕೆ ಹೋದರು. ಲೋಕಾಯುಕ್ತ ಪೊಲೀಸರನ್ನು ಭೇಟಿ ಮಾಡಿದ ನಾರಾಯಣ ಅರೆಜೋಗಿ ಅವರು ಕಂದಾಯ ನಿರೀಕ್ಷಕ ಬಸವರಾಜ ಬಿಸ್ನಾಳ್ ಅವರಿಂದ ರೈತರಿಗೆ ಆಗುವ ಅನ್ಯಾಯದ ಬಗ್ಗೆ ವಿವರಿಸಿದರು. ಹಣ ಕೇಳಿದನ್ನು ರಹಸ್ಯವಾಗಿ ರೆಕಾರ್ಡ ಮಾಡಿದನ್ನು ಕೇಳಿಸಿದರು. ಕಂದಾಯ ನಿರೀಕ್ಷಕರಿಗೆ ಹಣ ಕೊಡುವಂತೆ ಲೋಕಾಯುಕ್ತರು ನಾರಾಯಣ ಅರೆಜೋಗಿ ಅವರಿಗೆ ತಿಳಿಸಿದ್ದು, ಹಣಪಡೆಯುವಾಗಲೇ ದಾಳಿ ಮಾಡಿದರು. ಕಂದಾಯ ನಿರೀಕ್ಷಕ ಬಸವರಾಜ ಅವರನ್ನು ಬಂಧಿಸಿ ಜೈಲಿಗೆ ಹಾಕಿದರು.