ಕಾರವಾರದ ಚಿತ್ತಾಕುಲ ಗ್ರಾಮ ಪಂಚಾಯತದ ಕಸ ವಿಲೇವಾರಿ ವಾಹನ ಕೈ ಕೊಟ್ಟಿದ್ದು, ಊರು ಗಬ್ಬೆದ್ದಿದೆ. ಅದರ ವಿರುದ್ಧ ಸದಾಶಿವಗಡದ 4ನೇ ತರಗತಿ ವಿದ್ಯಾರ್ಥಿನಿ ಅನಿಕಾ ನಾಯ್ಕ ಹೋರಾಟ ಶುರು ಮಾಡಿದ್ದಾರೆ!
2025ರ ಅಕ್ಟೋಬರ್ ತಿಂಗಳಿoದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ಬಂದು ಹಸಿ ಕಸ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಸ್ವಚ್ಛತೆ ಕೆಡುತ್ತಿದ್ದು, ಪರಿಸರ ಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಅನಿಕಾ ನಾಯ್ಕ ಅವರು ಆತಂಕವ್ಯಕ್ತಪಡಿಸಿ ಜಾಲತಾಣದಗಳ ಮೂಲಕ ಅಧಿಕಾರಿಗಳ ಗಮನಸೆಳೆದಿದ್ದಾರೆ. `ಈ ಗಂಭೀರ ಸಮಸ್ಯೆಗೆ ತಕ್ಷಣವೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ಮನೆಗಳಿಂದ ಹಸಿ ಕಸವನ್ನು ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಸಂಗ್ರಹಿಸಲು ವಿಶೇಷ ವಾಹನದ ವ್ಯವಸ್ಥೆ ಮಾಡಬೇಕು’ ಎಂದು ಅನಿಕಾ ನಾಯ್ಕ ಅವರು ಆಗ್ರಹಿಸಿದ್ದಾರೆ.
`ಸ್ವಚ್ಛ ಪಂಚಾಯತ್ ನಮ್ಮೆಲ್ಲರ ಜವಾಬ್ದಾರಿ. ಉತ್ತಮ ಪರಿಸರಕ್ಕಾಗಿ ಎದ್ದಿರುವ ಪ್ರತಿಯೊಂದು ಧ್ವನಿಗೂ ಮೌಲ್ಯವಿದೆ’ ಎಂದು ಅನಿಕಾ ನಾಯ್ಕ ಅವರು ಹೇಳಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಂತ್ರಜ್ಞಾನ ಸಬ್ದಳಕೆ ಮಾಡಿಕೊಂಡು ಪರಿಸರ ಕಾಳಜಿವಹಿಸಿದ ಅನಿಕಾ ನಾಯ್ಕ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ. ಆದರೆ, ಅನಿಕಾ ನಾಯ್ಕ ಅವರ ಮನವಿಗೆ ಅಧಿಕಾರಿಗಳು ಈವರೆಗೂ ಸ್ಪಂದಿಸಿಲ್ಲ. ಈ ಬಗ್ಗೆಯೂ ಆಕ್ರೋಶವ್ಯಕ್ತವಾಗುತ್ತಿದೆ.