ಲೈಕು-ಶೇರು-ಕಮೆಂಟಿನ ಆಸೆಗಾಗಿ ರಸ್ತೆ ಮೇಲೆ ಅಡ್ಡಾದಿಡ್ಡಿ ಬೈಕ್ ಓಡಿಸಿದ ಇನಸ್ಟಾಗ್ರಾಮ್ ಖಾತೆದಾರನ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಸರಾಗವಾಗಿ ಬೈಕಿನಲ್ಲಿ ಸಾಗುವುದನ್ನು ಬಿಟ್ಟು ವ್ಹೀಲಿಂಗ್ ಮಾಡಿದ್ದ ವ್ಯಕ್ತಿಗೆ ಇದೀಗ ಸಂಕಷ್ಟ ಎದುರಾಗಿದೆ.
ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸಚಿನ್ ಯಶವಂತರಾವ್ ಪವಾರ್ ಅವರು ಕರ್ತವ್ಯ ನಿಭಾಯಿಸುತ್ತಿದ್ದು, ಅವರು ಅಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿಯಾಗಿದ್ದಾರೆ. ಹೀಗಾಗಿ ವಿವಿಧ ಸಾಮಾಜಿಕ ಜಾಲತಾಣಗಳನ್ನು ಗಮನಿಸುವುದು ಅವರ ಕರ್ತವ್ಯವಾಗಿದೆ. ಜೂನ್ 25ರಂದು ಸಚಿನ್ ಪವಾರ್ ಅವರು ಇನಸ್ಟಾಗ್ರಾಂ ಖಾತೆ ನೋಡುವಾಗ ಅಲ್ಲಿ ವ್ಯಕ್ತಿಯೊಬ್ಬರು ವ್ಹೀಲಿಂಗ್ ಮಾಡಿದ ವಿಡಿಯೋ ಕಾಣಿಸಿದೆ. ಅದು ಭಟ್ಕಳದಲ್ಲಿ ಚಿತ್ರಿಕರಿಸಿದ ವಿಡಿಯೋ ಎಂಬುದು ಸಹ ಗೊತ್ತಾಗಿದೆ. ಅಪಾಯಕಾರಿಯಾಗಿ ಬೈಕ್ ಓಡಿಸಿದ ಇನಸ್ಟಾಗ್ರಾಮ್ ಖಾತೆದಾರನ ವಿರುದ್ಧ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
akkihotpiston ಹೆಸರಿನ ಖಾತೆಯಲ್ಲಿ ಭಟ್ಕಳದ ವಿವಿಧ ಸಾರ್ವಜನಿಕ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಮೂಲಕ ಅಪಾಯಕಾರಿಯಾಗಿ ವ್ಹೀಲಿಂಗ್ ನಡೆಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ ಕಾರಣ ಅವರು ಕೇಸು ದಾಖಲಿಸಿದ್ದಾರೆ. `ಈ ವಿಡಿಯೋಗಳು ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವುದರ ಜೊತೆಗೆ ಯುವಕರನ್ನು ಇಂಥ ಅಪಾಯಕಾರಿ ಸಾಹಸಗಳಿಗೆ ಪ್ರೇರೇಪಿಸುವಂತಿವೆ’ ಎಂದವರು ದೂರಿದ್ದಾರೆ. akkihotpiston ಖಾತೆದಾರನಿಗೆ ಲಕ್ಷಾಂತರ ಜನ ಪಾಲೋವರ್ಸ ಇದ್ದು, ವಿವಿಧ ಉತ್ಪನ್ನಗಳನ್ನು ಅವರು ಪ್ರಚಾರ ಮಾಡುತ್ತಿದ್ದಾರೆ. ಮುಖ್ಯವಾಗಿ ಬೈಕುಗಳ ಬಗ್ಗೆ ಅವರು ಪ್ರಚಾರ ಕಾರ್ಯ ನಡೆಸುತ್ತಿದ್ದು, ಪ್ರಕರಣ ದಾಖಲಾದ ನಂತರ ಆ ವಿಡಯೋ ಡಿಲಿಟ್ ಮಾಡಿದ್ದಾರೆ.